ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಪ್ರತಿಪಕ್ಷ ಮಹಾ ವಿಕಾಸ್ ಅಘಾಡಿ(ಎಂವಿಎ) ಹೀನಾಯ ಸೋಲಿಗೆ ತಮ್ಮನ್ನು ದೂಷಿಸಿದ ಶಿವಸೇನಾದ (ಯುಬಿಟಿ) ನಾಯಕರ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ಸುಪ್ರೀಂ ಕೋರ್ಟ್ ಯಾವ ಅರ್ಜಿಗಳನ್ನು ವಿಚಾರಣೆ ನಡೆಸಬೇಕೆಂದು ಒಂದು ಪಕ್ಷ ನಿರ್ಧರಿಸಬೇಕೆ? ಎಂದು ಪ್ರಶ್ನಿಸಿದ್ದಾರೆ.
ಶಿವಸೇನಾ ಪಕ್ಷ ಇಬ್ಭಾಗವಾದ ಬಳಿಕ ಪಕ್ಷಾಂತರ ಮಾಡಿದ ಶಾಸಕರ ಅನರ್ಹತೆ ಕುರಿತಾದ ಪ್ರಕರಣದ ಬಗ್ಗೆ ತೀರ್ಪು ನೀಡದಿರುವ ಬಗ್ಗೆ ನಿವೃತ್ತ ಸಿಜೆಐ ವಿರುದ್ಧ ಅಸಮಾಧಾನ ಹೊರಹಾಕಿದ್ದ ಶಿವಸೇನಾ(ಯುಬಿಟಿ) ನಾಯಕ ಸಂಜಯ್ ರಾವುತ್, ‘ಪಕ್ಷಾಂತರ ಮಾಡುವವರಲ್ಲಿ ಕಾನೂನು ಬಗ್ಗೆ ಇದ್ದ ಹೆದರಿಕೆಯನ್ನು ಚಂದ್ರಚೂಡ್ ದೂರ ಮಾಡಿದ್ದಾರೆ. ಚರಿತ್ರೆಯಲ್ಲಿ ಅವರ ಹೆಸರನ್ನು ಕಪ್ಪು ಅಕ್ಷರಗಳಲ್ಲಿ ಬರೆಯಲಾಗುತ್ತದೆ’ ಎಂದು ಟೀಕಿಸಿದ್ದರು.
‘ಪಕ್ಷಾಂತರ ಮಾಡಿದ ಶಾಸಕರ ಅನರ್ಹತೆ ಕುರಿತ ಅರ್ಜಿಗಳಿಗೆ ಸಂಬಂಧಿಸಿ ನಿರ್ಧಾರ ಕೈಗೊಳ್ಳದಿರುವ ಮೂಲಕ ಚಂದ್ರಚೂಡ್ ಅವರು ಪಕ್ಷಾಂತರಕ್ಕೆ ಮುಕ್ತ ಅವಕಾಶ ಕೊಟ್ಟಿದ್ದಾರೆ’ಎಂದು ಹೇಳಿದ್ದರು.
‘ಈ ವಿಚಾರದಲ್ಲಿ ಗೊಂದಲವಿದೆ. ಶಿವಸೇನಾ ಹಾಗೂ ಎನ್‌ಸಿಪಿ ಬಣಗಳ ಹೆಸರು, ಚಿಹ್ನೆ ವಿಚಾರವಾಗಿ ಎರಡು ವರ್ಷ ಕಳೆದರೂ ಸುಪ್ರೀಂ ಕೋರ್ಟ್ ತೀರ್ಪು ನೀಡಿಲ್ಲ. ಹೀಗಿದ್ದರೂ ಚುನಾವಣೆಗಳು ನಡೆದಿವೆ. ಹಾಗಾಗಿ, ಯಾರನ್ನು ನಾವು ನಂಬಬೇಕು? ನ್ಯಾಯಕ್ಕಾಗಿ ಯಾರ ಬಳಿ ಹೋಗಬೇಕು’ಎಂದು ಉದ್ಧವ್ ಹೇಳಿದ್ದರು.
ಈ ಬಗ್ಗೆ ಎಎನ್‌ಐ ಸಂದರ್ಶನದಲ್ಲಿ ಪ್ರತಿಕ್ರಿಯಿಸಿರುವ ಚಂದ್ರಚೂಡ್, ‘ನನ್ನ ಉತ್ತರವು ಅತ್ಯಂತ ಸರಳವಾಗಿದೆ. ಈ ವರ್ಷವಿಡೀ, ಸುಪ್ರೀಂ ಕೋರ್ಟ್‌ನ ಒಂಬತ್ತು ನ್ಯಾಯಮೂರ್ತಿಗಳ ಪೀಠ, ಏಳು ನ್ಯಾಯಮೂರ್ತಿಗಳ ಪೀಠ, ಐದು ನ್ಯಾಯಮೂರ್ತಿಗಳ ಪೀಠಗಳು ಮೂಲಭೂತವಾದ ಸಾಂವಿಧಾನಿಕ ಪ್ರಕರಣಗಳ ವಿಚಾರಣೆಯಲ್ಲಿ ತೊಡಗಿಕೊಂಡಿದ್ದವು. ಸುಪ್ರೀಂ ಕೋರ್ಟ್ ಯಾವ ಪ್ರಕರಣವನ್ನು ವಿಚಾರಣೆ ನಡೆಸಬೇಕು ಎಂಬುದನ್ನು ಯಾವುದೇ ಒಂದು ಪಕ್ಷ ಅಥವಾ ವ್ಯಕ್ತಿ ನಿರ್ಧರಿಸಬೇಕೆ? ಎಂದು ಪ್ರಶ್ನಿಸಿದ್ದಾರೆ. ಯಾವ ಪ್ರಕರಣ ವಿಚಾರಣೆ ನಡೆಸಬೇಕು ಎಂಬುದು ಮುಖ್ಯ ನ್ಯಾಯಮೂರ್ತಿಯ ನಿರ್ಧಾರವಾಗಿರುತ್ತದೆ ಎಂದಿದ್ದಾರೆ.
2022ರಲ್ಲಿ ಶಿವಸೇನಾ ಪಕ್ಷ ಇಬ್ಭಾಗವಾಯಿತು. ಶಿವಸೇನಾದಿಂದ ಹೊರಬಂದ ಏಕನಾಥ ಶಿಂದೆ ನೇತೃತ್ವದ ಬಣ, ಉದ್ಧವ್ ಠಾಕ್ರೆ ನೇತೃತ್ವದ ಎಂವಿಎ ಸರ್ಕಾರವನ್ನು ಉರುಳಿಸಿ, ಬಿಜೆಪಿ ಜೊತೆ ಸೇರಿಕೊಂಡು ಮಹಾಯುತಿ ಸರ್ಕಾರ ರಚಿಸಿತ್ತು. ಶಿಂದೆ ಸ್ವತಃ ತಾವೇ ಮುಖ್ಯಮಂತ್ರಿ ಆಗಿದ್ದರು.
ಏಕನಾಥ ಶಿಂದೆ ಸೇರಿ ಪಕ್ಷಾಂತರ ಮಾಡಿರುವ ಶಾಸಕರ ಅನರ್ಹತೆ ಕೋರಿ ಉದ್ಧವ್ ಠಾಕ್ರೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಶಿಂದೆ ಸಹ ಪ್ರತಿ ದಾವೆ ಹೂಡಿದ್ದರು. ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಶಾಸಕರ ಅನರ್ಹತೆ ಕುರಿತು ನಿರ್ಧಾರ ಕೈಗೊಳ್ಳುವಂತೆ ವಿಧಾನಸಭೆ ಸ್ಪೀಕರ್ ರಾಹುಲ್ ನಾರ್ವೇಕರ್ ಅವರಿಗೆ ಸೂಚಿಸಿತ್ತು. ಈ ವರ್ಷದ ಜನವರಿಯಲ್ಲಿ ಶಿಂದೆ ಬಣವೇ ನೈಜ ಶಿವಸೇನಾ ಎಂದು ಸ್ಪೀಕರ್ ಘೊಷಿಸಿದ್ದರು.
ಇದೇವೇಳೆ, ಕಳೆದ 20 ವರ್ಷಗಳಿಂದ ಕೆಲ ಪ್ರಕರಣಗಳ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಸುತ್ತಿದೆ ಎಂದು ಚಂದ್ರಚೂಡ್ ಒತ್ತಿ ಹೇಳಿದ್ದಾರೆ.
ನಮ್ಮ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ನಿಮಿಷವೂ ವಿಚಾರಣೆ ಆಗಿಲ್ಲ ಎಂದು ಅವರು ಆರೋಪಿಸುತ್ತಿದ್ದಾರೆ. ಅಂತಹ ಆರೋಪಕ್ಕೆ ಮಾನ್ಯತೆ ಸಿಗುತ್ತದೆಯೇ? ಪ್ರಮುಖ ಸಾಂವಿಧಾನಿಕ ಪ್ರಕರಣಗಳು 20 ವರ್ಷಗಳಿಂದ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಉಳಿದಿರುವುದು ಏಕೆ?. ಈ 20 ವರ್ಷಗಳಿಂದ ಕೆಲ ಪ್ರಕರಣಗಳನ್ನು ಸುಪ್ರೀಂ ಕೋರ್ಟ್ ಕೈಗೆತ್ತಿಕೊಂಡಿಲ್ಲ. ಹಾಗೇನಾದರೂ ಕೆಲ ಹಳೆಯ ಪ್ರಕರಣಗಳನ್ನು ಕೈಗೆತ್ತಿಕೊಂಡರೆ, ಒಂದು ನಿರ್ದಿಷ್ಟ ಪ್ರಕರಣವನ್ನು ಸೂಚಿಸಿ, ಅದರ ವಿಚಾರಣೆ ನಡೆಸಿಲ್ಲ ಎಂದು ಟೀಕಿಸುತ್ತೀರಿ. ನಮಗಿದ್ದ ಕಡಿಮೆ ಸಂಖ್ಯೆಯ ನ್ಯಾಯಮೂರ್ತಿಗಳಲ್ಲೇ ಸಾಕಷ್ಟು ಪ್ರಕರಣಗಳನ್ನು ವಿಚಾರಣೆ ನಡೆಸಲಾಗಿದೆ. ಈ ಬಗ್ಗೆ ನೀವು ನ್ಯಾಯಮೂರ್ತಿಗಳನ್ನು ಅಭಿನಂದಿಸಬೇಕು ಎಂದಿದ್ದಾರೆ.
ಶಿವಸೇನಾ(ಯುಬಿಟಿ) ಟೀಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದೇ ಸಮಸ್ಯೆ. ರಾಜಕಾರಣದ ಒಂದು ಬಣವು ಈ ರೀತಿ ಟೀಕೆ ಮಾಡುತ್ತದೆ. ನಾವು ಎಲೆಕ್ಷನ್ ಬಾಂಡ್ ಕುರಿತ ತೀರ್ಪು ಪ್ರಕಟಿಸಿದೆವು. ಇದಕ್ಕಿಂತ ಅದು ಕಡಿಮೆ ಪ್ರಾಮುಖ್ಯತೆ ಹೊಂದಿತ್ತೇ? ನಮ್ಮ ಕಾರ್ಯಸೂಚಿಗಳನ್ನು ಆಧರಿಸಿ ವಿಚಾರಣೆ ನಡೆಯುತ್ತಿರುತ್ತದೆ ಎಂದಿದ್ಧಾರೆ.
ಅಲಹಾಬಾದ್ ಹೈಕೋರ್ಟ್ ಆದೇಶದ ಅನ್ವಯ ಮದರಸಾಗಳನ್ನು ಮುಚ್ಚುವ ಪ್ರಕರಣವನ್ನು ನಾವು ವಿಚಾರಣೆ ನಡೆಸಿದ್ದೇವೆ. ವ್ಯಕ್ತಿಗತ ಹಕ್ಕುಗಳನ್ನು ಕಸಿಯುವಂತಹ ಪ್ರಕರಣಗಳಿಗೆ ಆದ್ಯತೆ ಕೊಟ್ಟಿದ್ದೇವೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.