ಫರೀದ್‍ಕೋಟ್: ಫರೀದ್‍ಕೋಟ್‍ನಿಂದ 35 ಕಿಮೀ ದೂರದಲ್ಲಿರುವ ಪಂಜಾಬಿ ವಿಶ್ವವಿದ್ಯಾನಿಲಯಕ್ಕೆ ಸೇರಿದ ಕಾಲೇಜೊಂದರಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪಂಜಾಬ್ ಡಿಎಸ್ಪಿ ಬಲ್ಜಿಂದರ್ ಸಿಂಗ್ ಸಂಧು (50) ಗುಂಡು ಹಾರಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತಮ್ಮ ಕೈಯಲ್ಲಿದ್ದ ಪಿಸ್ತೂಲ್‍ನಿಂದಲೇ ಬಲ್ಜಿಂದರ್ ಸಿಂಗ್ ಗುಂಡು ಹಾರಿಸಿಕೊಂಡಿಸಿದ್ದಾರೆ. ಈ ವೇಳೆ ಹತ್ತಿರದಲ್ಲಿದ್ದ ಕಾನ್‍ಸ್ಟೇಬಲ್ ಲಾಲ್ ಸಿಂಗ್ ಅವರಿಗೂ ಗಂಭೀರ ಗಾಯಗಳಾಗಿವೆ. ಡಿಎಸ್ಪಿ ಮತ್ತು ಕಾನ್‍ಸ್ಟೇಬಲ್‍ನ್ನು ಗುರು ಗೋಬಿಂದ್ ಸಿಂಗ್ ಮೆಡಿಕಲ್ ಕಾಲೇಜಿಗೆ ದಾಖಲಿಸಲಾಗಿತ್ತು, ಅಲ್ಲಿ ಬಲ್ಜಿಂದರ್ ಸಿಂಗ್ ಕೊನೆಯುಸಿರೆಳೆದಿದ್ದಾರೆ, ಕಾನ್‍ಸ್ಟೇಬಲ್ ಲಾಲ್ ಸಿಂಗ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ.
ಅಲ್ಲಿನ ಸ್ಥಳೀಯ ಪೊಲೀಸ್ ಮತ್ತು ವಿದ್ಯಾರ್ಥಿಗಳ ನಡುವಿನ ಸಮಸ್ಯೆಯನ್ನು ಪರಿಹರಿಸುವುದಕ್ಕಾಗಿ ಡಿಎಸ್ಪಿ ಆ ಕಾಲೇಜಿಗೆ ಹೋಗಿದ್ದರು, ಜೈತು ಸ್ಟೇಷನ್ ಹೌಸ್ ಆಫೀಸರ್ (ಎಸ್‍ಎಚ್‍ಒ) ಗುರ್ಮೀತ್ ಸಿಂಗ್ ಅವರು ನಡೆಸಿದ ನೈತಿಕ ಪೊಲೀಸ್‍ಗಿರಿ ವಿರುದ್ಧ ಅಲ್ಲಿನ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದರು. ಗುರ್ಮೀತ್ ಸಿಂಗ್ ಓರ್ವ ವಿದ್ಯಾರ್ಥಿನಿ ಸೇರಿದಂತೆ ಮೂವರು ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ ಎಂಬ ಆರೋಪವೂ ಇದೆ.
ಪ್ರತಿಭಟನೆ ನಡೆಯುತ್ತಿದ್ದ ವೇಳೆ ಡಿಎಸ್ಪಿ ತಲೆಗೆ ಪಿಸ್ತೂಲ್ ಇಟ್ಟು ನಾನು ಗುಂಡು ಹಾರಿಸುತ್ತೀನಿ ಎಂದು ಹೇಳಿದ್ದಾರೆ. ಕ್ಷಣ ಹೊತ್ತಲ್ಲೇ ತಲೆಗೆ ಗುಂಡು ಹಾರಿಸಿಕೊಂಡಿದ್ದಾರೆ. ಡಿಎಸ್ಪಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡುತ್ತಿರುವ ದೃಶ್ಯವಿರುವ ವಿಡಿಯೊ ಈಗ ವೈರಲ್ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.