ADVERTISEMENT

ಕನ್ನಡ ಅಧ್ಯಯನ ಪೀಠ ಉಳಿಸಲು ಉಚಿತ ತರಗತಿ

ಎಂ.ಫಿಎಲ್‌, ಪಿಎಚ್‌.ಡಿ ಪ್ರವೇಶ ಸೀಟು ಕಡಿತಗೊಳಿಸಿದ ಜೆಎಎನ್‌ಯು

ಪಿಟಿಐ
Published 11 ಫೆಬ್ರುವರಿ 2018, 19:34 IST
Last Updated 11 ಫೆಬ್ರುವರಿ 2018, 19:34 IST
ಪುರುಷೋತ್ತಮ ಬಿಳಿಮಲೆ
ಪುರುಷೋತ್ತಮ ಬಿಳಿಮಲೆ   

ನವದೆಹಲಿ: ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ (ಜೆಎನ್‌ಯು) ಕನ್ನಡ ಅಧ್ಯಯನ ಪೀಠ ಉಳಿಸುವ ನಿಟ್ಟಿನಲ್ಲಿ ಉಚಿತ ಭಾಷಾ ತರಗತಿಗಳನ್ನು ಆರಂಭಿಸಲಾಗಿದೆ.

ಪೀಠದ ಮುಖ್ಯಸ್ಥ ಪುರುಷೋತ್ತಮ ಬಿಳಿಮಲೆ ಅವರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಮತ್ತು ಹೊರಗಿನವರಿಗೂ ಈ ತರಗತಿಗಳನ್ನು ನಡೆಸುತ್ತಿದ್ದಾರೆ.

2015ರಲ್ಲಿ ಪೀಠ ಆರಂಭಿಸಿದ ದಿನದಿಂದಲೂ ಇದುವರೆಗೂ ಎಂ.ಫಿಲ್‌ ಮತ್ತು ಪಿಎಚ್‌.ಡಿ ಪ್ರವೇಶಕ್ಕೆ ಒಬ್ಬರೂ ದಾಖಲಾಗಿಲ್ಲ. ಹೀಗಾಗಿ, ವಿದ್ಯಾರ್ಥಿಗಳು ಕನ್ನಡ ಅಧ್ಯಯನ ಕೈಗೊಳ್ಳುವಂತೆ ಉತ್ತೇಜನ ನೀಡಲು ಬಿಳಿಮಲೆ ಅವರು ಈ ಹೆಜ್ಜೆಯನ್ನಿಟ್ಟಿದ್ದಾರೆ. ‌

ADVERTISEMENT

‘ಸೋಮವಾರ, ಬುಧವಾರ ಮತ್ತು ಶುಕ್ರವಾರದಂದು 4 ಗಂಟೆಯಿಂದ 6ಗಂಟೆವರೆಗೆ ತರಗತಿಗಳನ್ನು ನಡೆಸಲಾಗುತ್ತದೆ’ ಎಂದು ಬಿಳಿಮಲೆ ತಿಳಿಸಿದ್ದಾರೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜೆಎನ್‌ಯುನಲ್ಲಿ ಕನ್ನಡ ಅಧ್ಯಯನ ಪೀಠ ಸ್ಥಾಪಿಸಲು ದಶಕದಿಂದ ಪ್ರಯತ್ನಿಸಿದ್ದವು. ಕರ್ನಾಟಕ ಸರ್ಕಾರ ಮತ್ತು ಜೆಎನ್‌ಯು ನಡುವೆ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಪೀಠವನ್ನು ಸ್ಥಾಪಿಸಿ, ಎಂ.ಫಿಲ್‌ ಮತ್ತು ಪಿಎಚ್‌.ಡಿ ಕೋರ್ಸ್‌ಗಳನ್ನು ನಡೆಸಲು ಉದ್ದೇಶಿಸಲಾಯಿತು. ಕರ್ನಾಟಕ ಸರ್ಕಾರ ಈ ಪೀಠಕ್ಕೆ ಪ್ರತಿ ವರ್ಷ ₹43 ಲಕ್ಷ ನೀಡುತ್ತಿದೆ. 2015ರ ಅಕ್ಟೋಬರ್‌ನಿಂದ ಈ ಪೀಠದ ಮುಖ್ಯಸ್ಥರಾಗಿ ಬಿಳಿಮಲೆ ಕಾರ್ಯನಿರ್ವಹಿಸುತ್ತಿದ್ದಾರೆ.

ಆದರೆ, ವಿಶ್ವವಿದ್ಯಾಲಯ 2016ರ ಡಿಸೆಂಬರ್‌ನಲ್ಲಿ ಸೀಟುಗಳನ್ನು ಕಡಿತಗೊಳಿಸುವ ಮೂಲಕ ಒಪ್ಪಂದವನ್ನು ಉಲ್ಲಂಘಿಸಿತು. ಕನ್ನಡ ಅಧ್ಯಯನ ಪೀಠಕ್ಕೆ ಒಂದು ಸೀಟು ಸಹ ನೀಡಿರಲಿಲ್ಲ.

‘ವಿಶ್ವವಿದ್ಯಾಲಯ ಒಪ್ಪಂದದ ನಿಯಮಾವಳಿಗಳನ್ನು ಉಲ್ಲಂಘಿಸಿದೆ. 2016ರ ನಂತರದ ಪ್ರವೇಶಕ್ಕೂ ಮುಂದುವರಿದಿದೆ’ ಎಂದು ಬಿಳಿಮಲೆ ತಿಳಿಸಿದ್ದಾರೆ.

ವಿಶ್ವವಿದ್ಯಾಲಯದ ಆಡಳಿತದಿಂದ ಯಾವುದೇ ರೀತಿಯ ಭರವಸೆಗಳು ದೊರೆಯದ ಕಾರಣ ಅವರು ಶಾಸ್ತ್ರೀಯ ಮತ್ತು ಶಾಸ್ತ್ರೀಯೇತರ ಕನ್ನಡ ಕೃತಿಗಳನ್ನು ಇಂಗ್ಲಿಷ್‌ಗೆ ಅನುವಾದ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ.

‘10ನೇ ಶತಮಾನದ ಶ್ರೀ ವಿಜಯ ಕವಿರಾಜಮಾರ್ಗ ಭಾಷಾಂತರ ಮುಗಿದಿದೆ. ಶಿವಕೋಟ್ಯಾಚಾರ್ಯನ ವಡ್ಡಾರಾಧನೆ ಮತ್ತು ರನ್ನನ ಸಾಹಸ ಭೀಮ ವಿಜಯಂ ಕೃತಿಗಳ ಭಾಷಾಂತರ ನಡೆಯುತ್ತಿದೆ’ ಎಂದು ಅವರು ತಿಳಿಸಿದ್ದಾರೆ.

ಈ ವರ್ಷದ ಡಿಸೆಂಬರ್‌ಗೆ ಬಿಳಿಮಲೆ ಅವರ ಅವಧಿ ಅಂತ್ಯಗೊಳ್ಳಲಿದೆ. ಅವರ ಅವಧಿ ವಿಸ್ತರಣೆಯಾದರೂ ವಿಶ್ವವಿದ್ಯಾಲಯ ಆಸಕ್ತಿ ವಹಿಸದ ಕಾರಣ ಪೀಠದ ಅಸ್ತಿತ್ವ ಉಳಿಯುವ ಲಕ್ಷಣಗಳು ಗೋಚರಿಸುತ್ತಿಲ್ಲ ಎಂದು ಹೇಳಲಾಗುತ್ತಿದೆ.

*
ಉಚಿತ ಕನ್ನಡ ತರಗತಿಗಳಿಗೆ ಪ್ರಸ್ತುತ 40 ವಿದ್ಯಾರ್ಥಿಗಳು ಹಾಜರಾಗುತ್ತಿದ್ದಾರೆ. ವಿದ್ಯಾರ್ಥಿಗಳು ಆಸಕ್ತಿ ತೋರಿಸಿದ್ದಾರೆ.
–ಪುರುಷೋತ್ತಮ ಬಿಳಿಮಲೆ,
ಜೆಎನ್‌ಯು ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.