ಹೈದರಾಬಾದ್: ಎರಡು ವರ್ಷದ ಹಿಂದೆ ಇಲ್ಲಿನ ವಿಶ್ವವಿದ್ಯಾಲಯದ ವಸತಿನಿಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲ ಕುಟುಂಬಕ್ಕೆ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ನೀಡಿದ ₹8ಲಕ್ಷ ಪರಿಹಾರವನ್ನು ವೇಮುಲ ತಾಯಿ ರಾಧಿಕಾ ವೇಮುಲ ಪಡೆದುಕೊಂಡಿದ್ದಾರೆ.
ತಮ್ಮ ವಕೀಲರು ಮತ್ತು ಬೆಂಬಲಿಗರ ಸಲಹೆ ಮೇರೆಗೆ ಪರಿಹಾರ ಧನ ಪಡೆಯಲು ಒಪ್ಪಿದ್ದಾಗಿ ರಾಧಿಕಾ ಹೇಳಿಕೆ ನೀಡಿದ್ದಾರೆ. ಆಡಳಿತ ಮಂಡಳಿಯ ಜೊತೆ ರಾಜಿಗೆ ಒಪ್ಪುವುದಿಲ್ಲ ಎಂದು ಈ ಹಿಂದೆ ಅವರು ಹೇಳಿದ್ದರು.
‘ವಿಶ್ವವಿದ್ಯಾಲಯದ ಅಧಿಕಾರಿಗಳುಮತ್ತು ಕುಲಪತಿ ಪಿ. ಅಪ್ಪಾರಾವ್ ಪರಿಹಾರ ನೀಡುತ್ತಿದ್ದಾರೆ ಎಂಬ ತಪ್ಪು ಗ್ರಹಿಕೆಯಿಂದಾಗಿ ಮೊದಲು ನಿರಾಕರಿಸಿದ್ದೆ. ಆದರೆ, ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗದ ಆದೇಶದ ಅನುಸಾರ ಪರಿಹಾರ ನೀಡುತ್ತಿದ್ದಾರೆ ಎಂದು ಕಾನೂನು ತಜ್ಞರು ಮನವರಿಕೆ ಮಾಡಿದ್ದಾರೆ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
2016ರ ಜನವರಿ 17ರಂದು ಪಿಎಚ್.ಡಿ ವಿದ್ಯಾರ್ಥಿ ರೋಹಿತ್ ವೇಮುಲ ಕ್ಯಾಂಪಸ್‌ನ ವಸತಿನಿಲಯದ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ವಿಶ್ವವಿದ್ಯಾಲಯದ ಶಿಸ್ತುಕ್ರಮದಿಂದ ಮನನೊಂದು ಆತ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಆರೋಪಿಸಲಾಗಿತ್ತು. ಈ ಪ್ರಕರಣ ರಾಜಕೀಯ ತಿರುವು ಪಡೆದಿತ್ತು. ವಿದ್ಯಾರ್ಥಿಗಳ ದೂರಿನ ಅನ್ವಯ ಕುಲಪತಿ ಅಪ್ಪಾರಾವ್ ಮತ್ತು ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.