ADVERTISEMENT

ಮಹಾರಾಷ್ಟ್ರ: 6 ತಿಂಗಳಲ್ಲಿ 557 ರೈತರ ಆತ್ಮಹತ್ಯೆ

ಅಮರಾವತಿ ವಿಭಾಗೀಯ ಆಯುಕ್ತರ ವರದಿಯಲ್ಲಿ ಉಲ್ಲೇಖ

ಪಿಟಿಐ
Published 10 ಜುಲೈ 2024, 15:31 IST
Last Updated 10 ಜುಲೈ 2024, 15:31 IST
   

ಅಮರಾವತಿ: ಮಹಾರಾಷ್ಟ್ರದ ಅಮರಾವತಿ ಆಡಳಿತ ವಿಭಾಗದ ಐದು ಜಿಲ್ಲೆಗಳಲ್ಲಿ ಈ ವರ್ಷದ ಜನವರಿಯಿಂದ ಜೂನ್‌ವರೆಗೆ 557 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಧಿಕೃತ ವರದಿಯೊಂದು ತಿಳಿಸಿದೆ.

ಅಮರಾವತಿ ಜಿಲ್ಲೆಯಲ್ಲಿ 170 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಯವತ್ಮಾಲ್‌ನಲ್ಲಿ 150, ಬುಲ್ದಾನದಲ್ಲಿ 111, ಅಕೋಲಾದಲ್ಲಿ 92 ಹಾಗೂ ವಾಶಿಮ್ ಜಿಲ್ಲೆಯಲ್ಲಿ 34 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಅಮರಾವತಿ ವಿಭಾಗೀಯ ಆಯುಕ್ತರು ಸಿದ್ಧಪಡಿಸಿರುವ ವರದಿಯಲ್ಲಿ ತಿಳಿಸಲಾಗಿದೆ. 

53 ಪ್ರಕರಣಗಳಲ್ಲಿ ಮೃತರ ಕುಟುಂಬ ವರ್ಗಕ್ಕೆ ಸರ್ಕಾರ ನೆರವು ನೀಡಿದ್ದು, 284 ಪ್ರಕರಣಗಳು ತನಿಖೆಗಾಗಿ ಬಾಕಿ ಉಳಿದಿವೆ ಎಂದು ವರದಿಯು ತಿಳಿಸಿದೆ.

ADVERTISEMENT

‘ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ರಾಜ್ಯಗಳಲ್ಲಿ ಮಹಾರಾಷ್ಟ್ರವೂ ಒಂದಾಗಿದೆ. ರಾಜ್ಯದಲ್ಲಿ ಅಮರಾವತಿ ಮೊದಲ ಸ್ಥಾನದಲ್ಲಿದೆ’ ಎಂದು ಅಮರಾವತಿ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಕಾಂಗ್ರೆಸ್‌ ನಾಯಕ ಬಲ್ವಂತ್ ವಾಂಖಡೆ ಅವರು ವರದಿಯಲ್ಲಿ ಉಲ್ಲೇಖಿಸಿರುವ ಅಂಕಿ–ಅಂಶಗಳಿಗೆ ಪ್ರತಿಕ್ರಿಯಿಸಿದ್ದಾರೆ.

‘ಬೆಳೆ ನಷ್ಟ, ಮಳೆಯ ಕೊರತೆ, ಸಾಲದ ಹೊರೆ ಹಾಗೂ ಸಕಾಲಕ್ಕೆ ಸಿಗದ ಕೃಷಿ ಸಾಲ ರೈತರನ್ನು ಆತ್ಮಹತ್ಯೆಯತ್ತ ದೂಡುತ್ತಿವೆ. ಸರ್ಕಾರ ಸಂಕಷ್ಟದಲ್ಲಿರುವ ಬೇಸಾಯಗಾರರ ನೆರವಿಗೆ ಧಾವಿಸಬೇಕು. ಆದಾಯ ದ್ವಿಗುಣಗೊಳಿಸುವ ಭರವಸೆಯನ್ನು ಈಡೇರಿಸಬೇಕು’ ಎಂದು ವಾಂಖಡೆ ಒತ್ತಾಯಿಸಿದ್ದಾರೆ.

‘ರೈತರ ಆತ್ಮಹತ್ಯೆ ಗಂಭೀರ ಸಮಸ್ಯೆಯಾಗಿದೆ. ಕೃಷಿಕರ ಸಾವುಗಳನ್ನು ತಡೆಯಲು ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆದಿದೆ’ ಎಂದು ರಾಜ್ಯ ಸರ್ಕಾರದ ವಸಂತರಾವ್‌ ನಾಯ್ಕ್ ಶೆಟ್ಕರಿ ಸ್ವಾವಲಂಬಿ ಮಿಷನ್‌ನ ಅಧ್ಯಕ್ಷ ನಿಲೇಶ್ ಹೆಲೊಂಡೆ ಪಾಟೀಲ್ ತಿಳಿಸಿದ್ದಾರೆ.

‘ಗ್ರಾಮ ಪಂಚಾಯಿತಿ ಹಂತದಲ್ಲಿ ಸ್ಥಳೀಯ ಆಡಳಿತವು ರೈತರ ಆದಾಯ ದ್ವಿಗುಣಕ್ಕಾಗಿ ಸರ್ಕಾರದ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ವ್ಯವಸಾಯಗಾರರ ಮಕ್ಕಳ ಶಿಕ್ಷಣ ಹಾಗೂ ಕುಟುಂಬದ ಸದಸ್ಯರ ವೈದ್ಯಕೀಯ ವೆಚ್ಚಕ್ಕೆ ನೆರವು ನೀಡುತ್ತಿದೆ. ಮಿಷನ್‌ ಸಹ ಇದಕ್ಕೆ ಪೂರಕವಾಗಿ ಬೇಸಾಯಗಾರರು ಮತ್ತು ವಿಮಾ ಕಂಪನಿಗಳ ನಡುವಿನ ಸಂವಹನವನ್ನು ಸುಲಭಗೊಳಿಸಿದೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.