ಠಾಣೆ, ಮಹಾರಾಷ್ಟ್ರ : ಅಕ್ರಮವಾಗಿ ಭಾರತದಲ್ಲಿ ನೆಲೆಸಿದ್ದ ಆರು ಮಂದಿ ಬಾಂಗ್ಲಾ ಪ್ರಜೆಗಳಿಗೆ ಠಾಣೆ ಕೋರ್ಟ್ ನಾಲ್ಕು ವರ್ಷ ಜೈಲು ಶಿಕ್ಷೆ ಹಾಗೂ₹5,000 ದಂಡ ವಿಧಿಸಿದೆ.
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶೆ ಎನ್.ಎಚ್ ಮಖಾರೆ ಅವರು ಇತ್ತೀಚೆಗೆ ಈ ಆದೇಶ ನೀಡಿದ್ದಾರೆ.
2018ರ ಮಾರ್ಚ್‌ನಲ್ಲಿ ಭಿವಂಡಿ ನಗರದ ವಸತಿ ಕಟ್ಟಡವೊಂದರ ಮೇಲೆ ದಾಳಿ ನಡೆಸಿದ ಠಾಣೆಯ ಭಯೋತ್ಪಾದನಾ ನಿಗ್ರಹ ದಳದ ಪೊಲೀಸರು ಯಾವುದೇ ಅಧಿಕೃತ ದಾಖಲೆಗಳು ಹಾಗೂ ಪಾಸ್‌ಪೋರ್ಟ್ ಇಲ್ಲದೆ ನೆಲೆಸಿದ್ದ ಆರು ಮಂದಿ ಬಾಂಗ್ಲಾ ಪ್ರಜೆಗಳನ್ನು ಬಂಧಿಸಿದ್ದರು. ಇವರ ವಿರುದ್ಧ ವಿದೇಶಿ ಕಾಯ್ದೆ ಮತ್ತು ಪಾಸ್‌ಪೋರ್ಟ್ ಕಾಯ್ದೆಗಳಡಿ ಪ್ರಕರಣ ದಾಖಲಿಸಿದ್ದರು ಎಂದು ಪ್ರಾಸಿಕ್ಯೂಷನ್ ನ್ಯಾಯಾಲಯಕ್ಕೆ ತಿಳಿಸಿದೆ.
ಯಾವುದೇ ಅಧಿಕೃತ ದಾಖಲೆಗಳಿಲ್ಲದೆ ಅಕ್ರಮವಾಗಿ ನೆಲೆಸಿರುವ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪ್ರಾಸಿಕ್ಯೂಟರ್ ವಾದ ಮಂಡಿಸಿದರು. ಎರಡೂ ಕಡೆಯ ವಾದ ಆಲಿಸಿದ ನ್ಯಾಯಾಧೀಶರು ಆರೋಪಿಗಳಿಗೆ ನಾಲ್ಕು ವರ್ಷ ಸರಳ ಜೈಲು ಶಿಕ್ಷೆ ವಿಧಿಸಿದರು. ಶಿಕ್ಷೆಯ ಅವಧಿ ಮುಗಿದ ಬಳಿಕ ಅಪರಾಧಿಗಳನ್ನು ಅವರ ದೇಶಕ್ಕೆ ಗಡಿಪಾರು ಮಾಡಲು ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.