ಸಸರಾಮ್: ರಾಮನವಮಿ ಶೋಭಾ ಯಾತ್ರೆ ನಂತರ ಬಿಹಾರದ ಸಸರಾಮ್‌ನಲ್ಲಿ ಹಿಂಸಾಚಾರ ಭುಗಿಲೆದ್ದಿರುವ ನಡುವಯೇ, ಪಟ್ಟಣದಲ್ಲಿ ಶನಿವಾರ ಸಂಜೆ ಬಾಂಬ್ ಸ್ಫೋಟ ನಡೆದಿದೆ. ಘಟನೆಯಲ್ಲಿ 6 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ವಿಧಿ ವಿಜ್ಞಾನ ತಜ್ಞರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
ಘಟನೆ ಬಗ್ಗೆ ಮಾತನಾಡಿರುವ ಸಸಾರಾಮ್ ಜಿಲ್ಲಾಧಿಕಾರಿ ಧರ್ಮೇಂದ್ರ ಕುಮಾರ್, ‘ಸಸರಾಮ್ ಪಟ್ಟಣದಲ್ಲಿ ಶನಿವಾರ ಬಾಂಬ್ ಸ್ಫೋಟ ಸಂಭವಿಸಿದೆ. ಗಾಯಗೊಂಡವರನ್ನು ಬಿಎಚ್‌ಯು ಆಸ್ಪತ್ರೆಗೆ ಸೇರಿಸಲಾಗಿದೆ. ನಾವು ಎಲ್ಲಾ ಕೋನಗಳಿಂದಲೂ ತನಿಖೆ ನಡೆಸುತ್ತಿದ್ದೇವೆ’ ಎಂದು ತಿಳಿಸಿದರು.
‘ಸ್ಫೋಟಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ’ ಎಂದು ಅವರು ಹೇಳಿದರು.
‘ಗುಡಿಸಲೊಂದರಲ್ಲಿ ಸ್ಫೋಟ ಸಂಭವಿಸಿದೆ. ಸ್ಥಳದಲ್ಲಿ ಸ್ಕೂಟಿ ಪತ್ತೆಯಾಗಿದ್ದು ಅದನ್ನು ವಶಪಡಿಸಿಕೊಳ್ಳಲಾಗಿದೆ. ಮೇಲ್ನೋಟಕ್ಕೆ ಇದು ಕೋಮು ಹಿನ್ನೆಲೆಯದ್ದಲ್ಲ ಎಂದು ಗೊತ್ತಾಗಿದೆ’ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಹಿಂಸಾಚಾರದ ಹಿನ್ನೆಲೆಯಲ್ಲಿ ಸಸಾರಾಮ್‌ನಲ್ಲಿ ಶನಿವಾರ ಪೊಲೀಸ್ ತಂಡ, ವಿಶೇಷ ಕಾರ್ಯ ಪಡೆ (ಎಸ್‌ಟಿಎಫ್), ಮತ್ತು ಪ್ಯಾರಾ ಮಿಲಿಟರಿ ಪಡೆಗಳು ಜಂಟಿ ಪಥಸಂಚಲನ ನಡೆಸಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.