ADVERTISEMENT

ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯುವ ಮಹಿಳಾ ಉದ್ಯೋಗಿಗೆ 6 ತಿಂಗಳು ಮಾತೃತ್ವ ರಜೆ

ಪಿಟಿಐ
Published 24 ಜೂನ್ 2024, 10:40 IST
Last Updated 24 ಜೂನ್ 2024, 10:40 IST
ಬಾಡಿಗೆ ತಾಯ್ತನ
ಬಾಡಿಗೆ ತಾಯ್ತನ   

ಪ್ರಾತಿನಿಧಿಕ ಚಿತ್ರ

ನವದೆಹಲಿ: ಸರ್ಕಾರಿ ನೌಕರಿಯಲ್ಲಿರುವ ಮಹಿಳೆಯು ಬಾಡಿಗೆ ತಾಯ್ತನದ ಮೂಲಕ ಮಗು ಪಡೆದರೆ ಇನ್ನುಮುಂದೆ 180 ದಿನಗಳ ಮಾತೃತ್ವ ರಜೆ ಪಡೆಯಬಹುದಾಗಿದೆ. ಇದಕ್ಕೆ ಸಂಬಂಧಿಸಿದಂತೆ 50 ವರ್ಷಗಳ ಹಿಂದಿನ ಕಾಯ್ದೆಗೆ ತಿದ್ದುಪಡಿ ಮಾಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ.

ಕೇಂದ್ರೀಯ ನಾಗರಿಕ ಸೇವಾ (ರಜೆ) ನಿಯಮ–1972 ಕಾಯ್ದೆಗೆ ತಿದ್ದುಪಡಿ ತರುವುದರಿಂದ, ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯುವ 'ತಾಯಿ' ಹಾಗೂ 'ತಂದೆ'ಗೆ ರಜೆ ಜೊತೆಗೆ, ಮಗುವಿನ ಹಾರೈಕೆಗೂ ಅವಕಾಶ ದೊರೆಯಲಿದೆ.

ADVERTISEMENT

ಕೇಂದ್ರೀಯ ನಾಗರಿಕ ಸೇವಾ (ರಜೆ ತಿದ್ದುಪಡಿ) ನಿಯಮ–2024 ಕಾಯ್ದೆಗೆ ಸಂಬಂಧಿಸಿದಂತೆ ಸಿಬ್ಬಂದಿ ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದೆ.

'ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯುವ ಪ್ರಕರಣಗಳಲ್ಲಿ, ಮಗು ಹೆರುವ ತಾಯಿ ಹಾಗೂ ಮಗು ಪಡೆಯಲಿರುವ ತಾಯಿ ಇಬ್ಬರೂ ಸರ್ಕಾರಿ ನೌಕರರಾಗಿದ್ದಲ್ಲಿ ಹಾಗೂ ಎರಡಕ್ಕಿಂತ ಕಡಿಮೆ ಮಕ್ಕಳನ್ನು ಹೊಂದಿದ್ದರೆ, 180 ದಿನಗಳ ಮಾತೃತ್ವ ರಜೆ ಪಡೆಯಲು ಅವಕಾಶವಿರಲಿದೆ' ಎಂದು ತಿಳಿಸಿದೆ.

'ಈ ವ್ಯವಸ್ಥೆಯ ಮೂಲಕ ಮಗು ಪಡೆಯಲಿಚ್ಛಿಸುವ ಪುರುಷ/ತಂದೆ ಎರಡಕ್ಕಿಂತ ಕಡಿಮೆ ಮಕ್ಕಳನ್ನು ಹೊಂದಿದ್ದರೆ ಹಾಗೂ ಸರ್ಕಾರಿ ನೌಕರಿಯಲ್ಲಿದ್ದರೆ, ಮಗು ಹುಟ್ಟಿದ ಆರು ತಿಂಗಳ ಒಳಗೆ 15 ದಿನಗಳ ಪಿತೃತ್ವ ರಜೆ ಪಡೆಯಬಹುದಾಗಿದೆ' ಎಂದೂ ಹೇಳಿದೆ.

ಸರ್ಕಾರಿ ನೌಕರಿಯಲ್ಲಿರುವ ಮಹಿಳೆ ಬಾಡಿಗೆ ತಾಯ್ತನದ ಮೂಲಕ ಮಗು ಪಡೆದರೆ, ಮಾತೃತ್ವ ರಜೆ ಪಡೆಯಲು ಅವಕಾಶ ಕಲ್ಪಿಸುವ ಯಾವುದೇ ನಿಯಮಗಳು ಈವರೆಗೆ ಇರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.