ಗುವಾಹಟಿ: ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಗಂಭೀರವಾಗಿದ್ದು, ಶನಿವಾರ ಮತ್ತೆ ಆರು ಮಂದಿ ಸಾವಿಗೀಡಾಗಿದ್ದಾರೆ. ಒಟ್ಟು 24 ಲಕ್ಷ ಮಂದಿ ಬಾಧಿತರಾಗಿದ್ದಾರೆ ಎಂದು ಅಧಿಕೃತ ಬುಲೆಟಿನ್ ತಿಳಿಸಿದೆ.
ಭಾರಿ ಪ್ರಮಾಣದ ಪ್ರವಾಹದಿಂದಾಗಿ ಚರಾಯ್‌ದೇವ್‌ನಲ್ಲಿ ಇಬ್ಬರು ಹಾಗೂ ಗೋಲಪಾರ, ಮೊರಿಗಾಂವ್, ಸೋನಿತ್‌ಪುರ ಹಾಗೂ ತಿನಸುಕಿಯಾ ಜಿಲ್ಲೆಯಲ್ಲಿ ತಲಾ ಒಬ್ಬರು ಸಾವಿಗೀಡಾಗಿದ್ದಾರೆ ಎಂದು ಅಸ್ಸಾಂ ವಿಪತ್ತು ನಿರ್ವಹಣಾ ಪ್ರಾಧಿಕಾರ ತಳಿಸಿದೆ. ಇದರೊಂದಿಗೆ ಈ ವರ್ಷ ಪ್ರವಾಹ ಹಾಗೂ ಭೂಕುಸಿತಕ್ಕೆ ಸತ್ತವರ ಸಂಖ್ಯೆ 70ಕ್ಕೆ ಏರಿಕೆಯಾಗಿದೆ.
ಪ್ರವಾಹದಿಂದಾಗಿ 29 ಜಿಲ್ಲೆಯಲ್ಲಿ ಒಟ್ಟು 23,96,648 ಮಂದಿ ಬಾಧಿತರಾಗಿದ್ದು, 68,768.5 ಹೆಕ್ಟೇರ್ ಕೃಷಿ ಭೂಮಿ ಜಲಾವೃತವಾಗಿದೆ. 577 ಪರಿಹಾರ ಕೇಂದ್ರಗಳಲ್ಲಿ 53,429 ಮಂದಿ ಆಶ್ರಯ ಪಡೆದಿದ್ದಾರೆ.
ಬ್ರಹ್ಮಪುತ್ರ ನದಿಯು ನಿಮತಿಘಾಟ್, ತೇಜ್‌ಪುರ, ಗೋಲಪಾರ ಹಾಗೂ ಧುರ್ಬಿಯಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಬ್ರಹ್ಮಪುತ್ರೆಯ ಉಪನದಿಗಳೂ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ.
ಬಾರಕ್ ನದಿಯೂ ಎ.ಪಿ ಘಾಟ್, ಬಿ.ಪಿ ಘಾಟ್ ಹಾಗೂ ಕರೀಮ್‌ಗಂಜ್‌ನಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಒಟ್ಟು 15,49,161 ಪ್ರಾಣಿಗಳು ಪ್ರವಾಹಕ್ಕೆ ತುತ್ತಾಗಿವೆ. ಪ್ರವಾಹದ ಎರಡನೇ ಅಲೆಗೆ 114 ಕಾಡು ಪ್ರಾಣಿಗಳು ಅಸುನೀಗಿವೆ. 126 ರಸ್ತೆಗಳು, 2 ಸೇತುವೆಗಳು ಹಾನಿಗೀಡಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.