ಬೆಂಗಳೂರು: ಸಿಯಾಚಿನ್‌ನಲ್ಲಿ ಕರ್ತವ್ಯ ನಿರ್ವಹಿಸುವ ಯೋಧರ ಸಂಕಷ್ಟ ವಿವರಿಸುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಡೆಹ್ರಾಡೂನ್‌ನ ‘ಇಂಡಿಯನ್ ಮಿಲಿಟರಿ ಅಕಾಡೆಮಿ’ ಪೋಸ್ಟ್ ಮಾಡಿರುವ 2.20 ನಿಮಿಷಗಳ ವಿಡಿಯೊ ತೀವ್ರ ಚಳಿಯಲ್ಲಿ ಬದುಕುವ ಪ್ರತಿಕ್ಷಣದ ಸವಾಲುಗಳನ್ನುಕಣ್ಣಿಗೆ ಕಟ್ಟುವಂತೆ ವಿವರಿಸುತ್ತದೆ.
ಸುತ್ತಿಗೆಯಿಂದ ಒಡೆದರೂ ಚೂರಾಗದಷ್ಟು ಗಟ್ಟಿ ಇಟ್ಟಿಗೆಯಂತಿರುವ ಜ್ಯೂಸ್ ಪೊಟ್ಟಣ, ಕ್ರಿಕೆಟ್ ಬಾಲ್‌ನಷ್ಟು ಗಟ್ಟಿಯಾದ ಮೊಟ್ಟೆ, ಕಾವಲಿಗೆ ಚಚ್ಚಿದರೂ ರಸಬಿಡದ ಟೊಮೆಟೊ, ಶಕ್ತಿಪ್ರಯೋಗ ಮಾಡಿ ಕತ್ತಿಯಿಂದ ಸೀಳಿಯೇ ಬಳಸಬೇಕಾದ ಆಲೂಗಡ್ಡೆ–ಈರುಳ್ಳಿ... ನೋಡಿದರೆ ಮೈ ಜುಂ ಎನ್ನುವಂತಿದೆ ಈ ವಿಡಿಯೊ.
ಸಿಯಾಚಿನ್ ನೀರ್ಗಲ್ಲು ಪ್ರದೇಶದ ರಕ್ಷಣೆಗೆನಿಯೋಜನೆಗೊಂಡಿರುವ ಮೂವರು ಯೋಧರು ಶೀತದಿಂದ ಗಟ್ಟಿಯಾದ ಆಹಾರ ಪದಾರ್ಥಗಳನ್ನು ಬಳಸುವ ಸವಾಲಿನ ಬಗ್ಗೆ ಮಾತನಾಡಿದ್ದಾರೆ. ವಿಡಿಯೊ ಆರಂಭದಲ್ಲಿ ಸೈನಿಕರೊಬ್ಬರು ರಿಯಲ್ ಫ್ರೂಟ್ ಜ್ಯೂಸ್‌ನ ಪೊಟ್ಟಣವೊಂದನ್ನು ತೆಗೆಯಲು ಯತ್ನಿಸುತ್ತಾರೆ. ಸಾಧ್ಯವಾಗದಿದ್ದಾಗ ಅದರ ಮೇಲಿನ ರಟ್ಟಿನ ಕವಚನ್ನು ಹರಿದು ಹಾಕುತ್ತಾರೆ. ಆದರೆ ಒಳಗಿರುವ ಹಣ್ಣಿನ ರಸ ಕೆಂಪು ಇಟ್ಟಿಗೆಯಂತೆ ಗಟ್ಟಿಯಾಗಿರುತ್ತದೆ. ಮತ್ತೋರ್ವ ಯೋಧ ಅದನ್ನು ಸುತ್ತಿಗೆಯಿಂದ ಬಡಿದರೂ, ಹಣ್ಣಿನ ರಸದ ಇಟ್ಟಿಗೆ ಚೂರಾಗುವುದೇ ಇಲ್ಲ.
ಇದಾದ ನಂತರ ಮತ್ತೋರ್ವ ಯೋಧ ಗಟ್ಟಿ ಕಲ್ಲಿನಂತಾಗಿರುವ ಮೊಟ್ಟೆಗಳನ್ನು ಸುತ್ತಿಗೆಯಿಂದ ಬಡಿದು ಚೂರು ಮಾಡಲು ಯತ್ನಿಸುತ್ತಾರೆ. ಮೊಟ್ಟೆಯನ್ನು ಕಲ್ಲುಹಾಸಿನ ಮೇಲೆ ಜೋರಾಗಿ ಎಸೆದರೂ ಅದರ ಕವಚ ಹರಿಯುವುದಿಲ್ಲ. ಬದಲಿಗೆ ಅದು ಎಸೆದಷ್ಟೇ ವೇಗವಾಗಿ ಹಿಂದಕ್ಕೆ ಬಡಿಯುತ್ತೆ. ‘ನೋಡಿ ಸಿಯಾಚಿನ್‌ನಲ್ಲಿ ನಮಗೆ ಇಂಥ ಮೊಟ್ಟೆಗಳು ಸಿಗುತ್ತವೆ’ ಎಂದು ಯೋಧರು ತಮಾಷೆಮಾಡಿಕೊಂಡು ನಗುತ್ತಾರೆ. ಈರುಳ್ಳಿ, ಟೊಮೆಟಿ, ಶುಂಠಿ ಮತ್ತು ಆಲೂಗಡ್ಡೆ ಹೆಚ್ಚುವುದೂ ಇಷ್ಟೇ ಸಾಹಸದ ಕೆಲಸಗಳಾಗಿರುತ್ತವೆ.
‘ಸಿಯಾಚಿನ್‌ನಲ್ಲಿ ಉಷ್ಣಾಂಶ ಮೈನಸ್ 70 ಡಿಗ್ರಿಗಿಂತಲೂ ಕೆಳಗಿಳಿಯುತ್ತದೆ. ಇಲ್ಲಿ ಬದುಕು ನರಕ’ ಎನ್ನುವ ಸೈನಿಕರೊಬ್ಬರ ಮಾತು ವಿಡಿಯೊದದಲ್ಲಿದೆ. ಅವರಿಗೆ ಹಿನ್ನೆಲೆಯಲ್ಲಿ ಬಿಳಿ ಹಿಮದ ಮೇಲೆ ನೆಲೆ ನಿಂತಿರುವ ಸೇನಾ ಠಾಣೆ ಕಾಣಿಸುತ್ತದೆ.
ಸಿಯಾಚಿನ್ ನೀರ್ಗಲ್ಲು ಪ್ರದೇಶದಲ್ಲಿ ಬದುಕುವ ಸವಾಲು ವಿವರಿಸುವ ಈ ವಿಡಿಯೊ ಟ್ವಿಟರ್‌ನಲ್ಲಿ ವ್ಯಾಪಕವಾಗಿ ಶೇರ್ ಆಗಿದೆ. ‘ಸಿಯಾಚಿನ್ ಬದುಕು ನಾವು ಅಂದುಕೊಂಡಿರುವುದಕ್ಕೂ ಭೀಕರವಾಗಿರುತ್ತೆ. ಉಷ್ಣಾಂಶ ಮೈನಸ್ 30 ಡಿಗ್ರಿ ತಲುಪಿದರೆ ಒಂದು ಚಪಾತಿ–ದಾಲ್ ಮಾಡುವುದೂ ಸಾಹಸವಾಗಿಬಿಡುತ್ತೆ’ ಎಂದು ಟ್ವಿಟರ್‌ನಲ್ಲಿ ಹಲವರು ಅಭಿಪ್ರಾಯಪಟ್ಟಿದ್ದಾರೆ.
‘ಸಿಯಾಚಿನ್‌ನಲ್ಲಿ ಯೋಧರ ಬದುಕು: ಇಟ್ಟಿಗೆಯಂತಾದ ಜ್ಯೂಸ್, ಸುತ್ತಿಗೆಯಿಂದ ಹೊಡೆದರೂ ಚೂರಾಗದ ಮೊಟ್ಟೆ, ಇಷ್ಟಾದರೂ ಅವರ ಮೊಗದ ಮೇಲಿನ ಮುಗುಳ್ನಗೆ ಮಾಸಿಲ್ಲ’ ಎಂದು ನೀರಜ್ ರಜ್‌ಪೂತ್ ಎನ್ನುವವರು ಟ್ವಿಟರ್ ಖಾತೆಯಲ್ಲಿ ವಿಡಿಯೊ ಶೇರ್ ಮಾಡಿದ್ದಾರೆ.
ಭಾರತೀಯ ಸೇನೆಯ ಸಿಯಾಚಿನ್‌ನ ಮೂಲ ನೆಲೆಯು ಸಮುದ್ರಮಟ್ಟದಿಂದ ಸುಮಾರು 20 ಸಾವಿರ ಅಡಿ ಎತ್ತರದಲ್ಲಿದೆ. ಇದು ವಿಶ್ವದ ಅತಿಶೀತ ಯುದ್ಧಭೂಮಿ. ಶೀತ ಮಾರುತಗಳಿಂದ ಪಾರಾಗಲು ಸೈನಿಕರು ಅನುಕ್ಷಣ ಹೋರಾಡಬೇಕಾದ ಸ್ಥಿತಿ ಇಲ್ಲಿದೆ. ಭೂಕುಸಿತ, ಹಠಾತ್ ಉದುರುವ ಹಿಮ ಪರ್ವತಗಳು ಇಲ್ಲಿನ ಬದುಕನ್ನು ಇನ್ನಷ್ಟು ಭೀಕರಗೊಳಿಸಿವೆ. ಇಲ್ಲಿ ಉಷ್ಣಾಂಶ ಮೈನಸ್ 60 ಡಿಗ್ರಿಯಷ್ಟು ಕುಸಿಯುತ್ತದೆ.
ಹನುಮಂತಪ್ಪ ನೆನಪಾದರು
ಇದೀಗ ವೈರಲ್ ಆಗಿರುವ ಡೆಹ್ರಾಡೂನ್ ಮಿಲಿಟರಿ ಅಕಾಡೆಮಿ ಪೋಸ್ಟ್ ಮಾಡಿರುವ ಸಿಯಾಚಿನ್ ಯೋಧರ ಬದುಕಿನವಿಡಿಯೊ ನೋಡಿದ ಕನ್ನಡಿಗರಿಗೆ ಮೂರು ವರ್ಷಗಳ ಹಿಂದೆ ಸಿಯಾಚಿನ್‌ನಲ್ಲಿ ಸಂಭವಿಸಿದ ಹಿಮಪಾತದಲ್ಲಿ ಪವಾಡಸದೃಶವಾಗಿ ಬದುಕುಳಿದು ನಂತರ ದೆಹಲಿಯಲ್ಲಿ ಹುತಾತ್ಮರಾದಧಾರವಾಡಜಿಲ್ಲೆಬೆಟದೂರ ಗ್ರಾಮದ ಹನುಮಂತಪ್ಪ ನೆನಪಾಗುತ್ತಿದ್ದಾರೆ.
‘ಸಿಯಾಚಿನ್ ಪ್ರದೇಶದಲ್ಲಿಮಿಲಿಟರಿ ಸಂಘರ್ಷದಿಂದಮಡಿಯುವ ಯೋಧರು ಶೇ 20ರಷ್ಟು ಮಾತ್ರ. ಶೇ 80ರಷ್ಟು ಸೈನಿಕರು ಹಿಮ ಕಡಿತ, ಗ್ಯಾಂಗ್ರಿನ್, ಹಿಮಕುಸಿತದಿಂದಾಗಿಯೇ ಸಾವಿಗೀಡಾಗುತ್ತಾರೆ’ ಎನ್ನುವುದುಧಾರವಾಡ ಮೂಲದ ಸೇನಾಧಿಕಾರಿಶ್ರೀಕೃಷ್ಣ ಸರದೇಶಪಾಂಡೆ (ನಿವೃತ್ತ ಲೆಫ್ಟಿನೆಂಟ್ ಜನರಲ್) ಅವರ ಮಾತು
ಇನ್ನಷ್ಟು...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.