ADVERTISEMENT

ದೆಹಲಿ ವಿಧಾನಸಭೆ: 70 ಶಾಸಕರಲ್ಲಿ 61 ಶಾಸಕರ ಬಳಿ ಜನನ ಪ್ರಮಾಣ ಪತ್ರ ಇಲ್ಲ

ಏಜೆನ್ಸೀಸ್
Published 14 ಮಾರ್ಚ್ 2020, 5:32 IST
Last Updated 14 ಮಾರ್ಚ್ 2020, 5:32 IST
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್   

ನವದೆಹಲಿ: ದೆಹಲಿ ವಿಧಾನಸಭೆಗೆ ಚುನಾಯಿತರಾಗಿರುವ 70 ಮಂದಿ ಶಾಸಕರಲ್ಲಿ 61 ಮಂದಿಗೆ ಜನನ ಪ್ರಮಾಣಪತ್ರ (ಬರ್ತ್ ಸರ್ಟಿಫಿಕೇಟ್) ಇಲ್ಲ. ಇವರೆಲ್ಲರನ್ನೂ ಬಂಧನ ಕೇಂದ್ರ (ಡಿಟೆನ್ಷನ್ ಸೆಂಟರ್‌)ಗಳಿಗೆ ಕಳುಹಿಸಲು ಸಾಧ್ಯವೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.

ಶುಕ್ರವಾರ ದೆಹಲಿ ವಿಧಾನಸಭೆಯಲ್ಲಿ ರಾಷ್ಟ್ರೀಯ ಜನಸಂಖ್ಯೆ ನೋಂದಣಿ (ಎನ್ ಪಿಆರ್ ), ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್ ಸಿ)ಗಳಂತಹ ಕಾರ್ಯಕ್ರಮಗಳನ್ನು ಕೇಂದ್ರ ಹಿಂದಕ್ಕೆ ಪಡೆಯಬೇಕೆಂದು ಒತ್ತಾಯಿಸುವ ನಿರ್ಣಯವನ್ನು ಅಂಗೀಕರಿಸಲಾಗಿದೆ.

ದೇಶದಲ್ಲಿ ಆರ್ಥಿಕ ಸ್ಥಿತಿ ತೀರಾ ಕೆಳಮಟ್ಟದಲ್ಲಿದೆ. ನಿರುದ್ಯೋಗ ಸಮಸ್ಯೆ, ಕೊರೊನಾ ಸೋಂಕು ರಾಷ್ಟ್ರದ ಜನರನ್ನು ಕಾಡುತ್ತಿದೆ. ಕೇಂದ್ರ ಸರ್ಕಾರ ಎನ್‌ಪಿಆರ್, ಎನ್‌ಆರ್‌ಸಿಗಳಂತಹ ಕಾರ್ಯಕ್ರಮಗಳನ್ನು ಜಾರಿಗೆ ತರುವುದರ ಬದಲು ರಾಷ್ಟ್ರದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೆಲಸ ಮಾಡಬೇಕು.

ADVERTISEMENT

ಇವೆಲ್ಲಾ ಕಾರಣಗಳಿಂದ ಎನ್‌ಪಿಆರ್, ಎನ್‌ಆರ್‌ಸಿಗಳನ್ನು ಕೈಬಿಡಬೇಕೆಂದು ಒತ್ತಾಯಿಸಲಾಗಿದೆ.ಉಪ ಮುಖ್ಯಮಂತ್ರಿ ಮನಿಷ್ ಸಿಸೋಡಿಯಾ ಮಾತನಾಡಿ, ಗೃಹಮಂತ್ರಿಗಳು ಮತದಾರರ ಚೀಟಿ, ಪಾಸ್ ಪೋರ್ಟ್, ಆಧಾರ್ ಕಾರ್ಡ್‌ಗಳಷ್ಟೇ ಸಾಲುವುದಿಲ್ಲ ಜೊತೆಗೆ ಜನನ ಪ್ರಮಾಣ ಪತ್ರ ಕೂಡಬೇಕು ಎಂದಿದ್ದಾರೆ. ಆದರೆ, ಒಬ್ಬ ವ್ಯಕ್ತಿ ನೀಡಿದ ಮಾಹಿತಿಯನ್ನು ಯಾವ ಮಾನದಂಡ ಆಧಾರದ ಮೇಲೆ ಪರಿಶೀಲನೆ ಮಾಡಲಾಗುತ್ತದೆ ಎಂದಿದ್ದಾರೆ.

ಅಲ್ಲದೆ, ಕೇಂದ್ರ ಸರ್ಕಾರ ಜನಗಣತಿ ಮಾಡುವ ಜೊತೆಗೆ ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಮಾಡುತ್ತಿದೆ. ಈ ಪ್ರಕ್ರಿಯೆಯಲ್ಲಿ ಕೆಲವು ಸಮಸ್ಯೆಗಳಿವೆ ಎಂದು ತಿಳಿಸಿದ್ದಾರೆ.ಅಲ್ಲದೆ, ನಾನು ದೆಹಲಿ ವಿಧಾನಸಭೆ ಅಂಗೀಕರಿಸಿರುವ ನಿರ್ಣಯವನ್ನು ಬೆಂಬಲಿಸುತ್ತೇನೆ. ಸರ್ಕಾರ ಎನ್‌ಪಿಆರ್, ಎನ್‌ಆರ್‌ಸಿಯಂತಹ ಕಾರ್ಯಕ್ರಮಗಳನ್ನು ಕೈಬಿಡಬೇಕು. 2010ರಲ್ಲಿ ಜಾರಿಯಲ್ಲಿರುವಂತೆ ಎನ್ ಪಿಆರ್ ಕಾರ್ಯಕ್ರಮ ಮುಂದುವರಿಯಬೇಕು ಎಂದು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.