ADVERTISEMENT

ಆಂಧ್ರ: ಪಕ್ಷದ ಕಾರ್ಯಕರ್ತೆ ಜತೆಗಿನ ಟಿಡಿಪಿ ಶಾಸಕನ ಖಾಸಗಿ ಕ್ಷಣಗಳ ವಿಡಿಯೊ ಬಹಿರಂಗ

ಚಿತ್ತೂರು ಜಿಲ್ಲೆ ಸತ್ಯವೇಡು ಶಾಸಕ ಆದಿಮೂಲಂ ಪಕ್ಷದಿಂದ ಅಮಾನತು

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2024, 14:06 IST
Last Updated 5 ಸೆಪ್ಟೆಂಬರ್ 2024, 14:06 IST
   

ಹೈದರಾಬಾದ್‌: ಆಂಧ್ರಪ್ರದೇಶ ಚಿತ್ತೂರು ಜಿಲ್ಲೆ ಸತ್ಯವೇಡು ವಿಧಾನಸಭಾ ಕ್ಷೇತ್ರದ ಟಿಡಿಪಿ ಶಾಸಕ ಕೋನೇಟಿ ಆದಿಮೂಲಂ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದಿದೆ. ಪಕ್ಷದ ಮಹಿಳಾ ಘಟಕದ ಅಧ್ಯಕ್ಷೆಯೇ ಈ ಆರೋಪ ಮಾಡಿದ್ದಾರೆ.

‘ಶಾಸಕ ಆದಿಮೂಲಂ ನನಗೆ ನಿರಂತರವಾಗಿ ಲೈಂಗಿಕ ಕಿರುಕುಳ ನೀಡಿದ್ದಾರೆ’ ಎಂದು ಆರೋಪಿಸಿರುವ ಮಹಿಳೆ, ಶಾಸಕನೊಂದಿಗೆ ತಾನು ಕಳೆದ ಖಾಸಗಿ ಕ್ಷಣಗಳನ್ನು ಪೆನ್‌ ಕ್ಯಾಮೆರಾ ಬಳಸಿ ಚಿತ್ರೀಕರಿಸಿದ್ದಾರೆ.

ಈ ವಿಡಿಯೊ ಗುರುವಾರ ಬಹಿರಂಗಗೊಂಡಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾಗಿದೆ. ಇದರ ಬೆನ್ನಲ್ಲೇ, 66 ವರ್ಷದ ಆದಿಮೂಲಂ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ.

ADVERTISEMENT

‘ಶಾಸಕ ಕಳೆದ ಕೆಲ ತಿಂಗಳಿನಿಂದ ನನಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದ. ಕೊನೆಗೆ, ಆತನ ಲೈಂಗಿಕ ಆಸೆ ಪೂರೈಸಲು ಒಪ್ಪಿಕೊಳ್ಳಬೇಕಾಯಿತು. ಶಾಸಕನ ಕಿರುಕುಳ ಸಹಿಸಿಕೊಳ್ಳಲಾಗದೇ, ಆತನೊಂದಿಗಿನ ಖಾಸಗಿ ಕ್ಷಣಗಳಗಳನ್ನು ಚಿತ್ರೀಕರಿಸಿ, ಬಹಿರಂಗಗೊಳಿಸಿದೆ’ ಎಂದು 36 ವರ್ಷದ ಮಹಿಳೆ ಆರೋಪಿಸಿದ್ದಾರೆ.

ಈ ವಿಡಿಯೊಗಳನ್ನು ಜುಲೈನಲ್ಲಿ ಚಿತ್ರೀಕರಿಸಿದ್ದು ಎನ್ನಲಾಗಿದೆ. ‘ವಿಡಿಯೊ ಚಿತ್ರೀಕರಣಕ್ಕೆ ಪತಿ ನೆರವಾಗಿದ್ದರು. ಈ ಬಾರಿ, ಪೆನ್‌ ಕ್ಯಾಮೆರಾದೊಂದಿಗೆ ಹೋಟೆಲ್‌ಗೆ ಹೋಗಿದ್ದಾಗ, ಖಾಸಗಿ ಕ್ಷಣಗಳ ಚಿತ್ರೀಕರಣ ಮಾಡಿದೆ’ ಎಂದು ಹೇಳಿದ್ದಾರೆ.

‘ಆದಿಮೂಲಂ ಪಕ್ಷಕ್ಕೆ ಸೇರ್ಪಡೆಯಾದಾಗ, ನಾನು ಮಾತ್ರವಲ್ಲ, ಟಿಡಿಪಿಯ ಹಲವು ಮುಖಂಡರು ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಅವರಿಗೆ ಸತ್ಯವೇಡು ಕ್ಷೇತ್ರದಿಂದ ಟಿಕೆಟ್‌ ನೀಡಲಾಯಿತು. ಎನ್‌.ಚಂದ್ರಬಾಬು ನಾಯ್ಡು ಅವರು ಮುಖ್ಯಮಂತ್ರಿಯಾಗಬೇಕಾದರೆ, ಟಿಡಿಪಿ ಗೆಲ್ಲಬೇಕು ಎಂಬ ದೃಷ್ಟಿಯಿಂದ ಅವರ ಗೆಲುವಿಗೆ ಶ್ರಮಿಸಿದೆ’ ಎಂದು ಮಹಿಳೆ ಹೇಳಿದ್ದಾರೆ.

‘ಚುನಾವಣೆ ಮುಗಿದ ನಂತರ, ಆದಿಮೂಲಂ ನನಗೆ ಕಿರುಕುಳ ನೀಡಲು ಆರಂಭಿಸಿದರು. ತಿರುಪತಿಯ ಹೋಟೆಲ್‌ನಲ್ಲಿ ನಾನು ಮತ್ತು ಆದಿಮೂಲಂ ಎರಡು ಬಾರಿ ಭೇಟಿಯಾಗಿದ್ದವು. ಎರಡು ಬಾರಿಯೂ ಆತ ನನಗೆ ಲೈಂಗಿಕ ಕಿರುಕುಳ ನೀಡಿದ್ದರು. ಆತ ಕಿರುಕುಳ ನೀಡುವುದು ನಿಲ್ಲಲಿಲ್ಲ. ಮಧ್ಯರಾತ್ರಿಯೂ ಕರೆ ಮಾಡುತ್ತಿದ್ದರು’ ಎಂದಿದ್ದಾರೆ.

‘ಶಾಸಕನೊಬ್ಬ ಮಧ್ಯರಾತ್ರಿಯೂ ಕರೆ ಮಾಡುತ್ತಿದ್ದ ಬಗ್ಗೆ ನನ್ನ ಪತಿ ಅನುಮಾನಗೊಂಡು, ಪ್ರಶ್ನಿಸಿದರು. ಆಗ, ನಾನು ಎಲ್ಲ ವಿಷಯವನ್ನು ಪತಿಗೆ ವಿವರಿಸಿದೆ’ ಎಂದು ಸಂತ್ರಸ್ತೆ ಹೇಳಿದ್ದಾರೆ.

ಆದಿಮೂಲಂ 2019ರಲ್ಲಿ ಇದೇ ಕ್ಷೇತ್ರದಿಂದ ವೈಎಸ್‌ಆರ್‌ ಕಾಂಗ್ರೆಸ್‌ನಿಂದ ಗೆದ್ದಿದ್ದರು. ಪರಿಶಿಷ್ಟ ಜಾತಿಗೆ ಮೀಸಲಾದ ಸತ್ಯವೇಡು ಕ್ಷೇತ್ರದಿಂದ ಈ ಬಾರಿ ಸ್ಪರ್ಧಿಸಲು ಪಕ್ಷದ ಮುಖ್ಯಸ್ಥ ವೈ.ಎಸ್‌.ಜಗನ್‌ಮೋಹನ್‌ ರೆಡ್ಡಿ ಟಿಕೆಟ್‌ ನಿರಾಕರಿಸಿದ್ದರು.

ಹೀಗಾಗಿ, ಟಿಡಿಪಿ ಸೇರಿದ್ದ ಆದಿಮೂಲಂ, ಸತ್ಯವೇಡು ಕ್ಷೇತ್ರದಿಂದ ಮತ್ತೆ ಗೆದ್ದು ಬಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.