ಗುವಾಹಟಿ: ಸೋಮವಾರ ನಸುಕಿನ ಜಾವ ನಡೆದ ಭೀಕರ ಕಾರು ಅಪಘಾತದಲ್ಲಿ ಅಸ್ಸಾಂ ಎಂಜಿನಿಯರಿಂಗ್ ಕಾಲೇಜಿನ (ಎಇಸಿ) 7 ವಿದ್ಯಾರ್ಥಿಗಳು ಮೃತಪಟ್ಟಿರುವ ಘಟನೆ ಗುವಾಹಟಿಯಲ್ಲಿ ನಡೆದಿದೆ.
ಗುವಾಹಟಿಯ ಜಾಲುಕ್‌ಬಾರಿ ಪ್ರದೇಶದಲ್ಲಿರುವ ಎಇಸಿ ಕಾಲೇಜಿನ ಮೂರನೇ ವರ್ಷದ 10 ವಿದ್ಯಾರ್ಥಿಗಳು ಎಸ್‌ಯುವಿ ಕಾರಿನಲ್ಲಿ ಕಾಲೇಜು ಕ್ಯಾಂಪಸ್‌ನಿಂದ ಹೊರಗೆ ಹೋಗುತ್ತಿದ್ದರು. ಈ ವೇಳೆ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಮತ್ತೊಂದು ಬದಿಯ ರಸ್ತೆಯಲ್ಲಿ ವೇಗವಾಗಿ ಬರುತ್ತಿದ್ದ ಬೊಲೆರೊ ಸರಕು ಸಾಗಣೆ ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ವಿರೂಪಗೊಂಡಿದ್ದು, ಸ್ಥಳದಲ್ಲೇ ಏಳು ವಿದ್ಯಾರ್ಥಿಗಳು ಮೃತರಾಗಿದ್ದಾರೆ.
ಘಟನೆಯಲ್ಲಿ ಇನ್ನೂ ಮೂವರು ವಿದ್ಯಾರ್ಥಿಗಳು ಹಾಗೂ ಬೊಲೆರೊದ ಚಾಲಕ ಹಾಗೂ ಕ್ಲೀನರ್ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಗುವಾಹಟಿಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಮೃತರನ್ನು ಕೌಶಿಕ್ ಬರುವಾ, ಕೌಶಿಕ್ ಮೋಹನ್, ರಾಜ್ ಕಿರಣ್ ಭೂಯಾನ್, ಇಮೋನ್ ಬರುವಾ, ಅರಿಂದಮ್ ಭೋವಲ್, ಉಪಾಂಶು ಶರ್ಮಾ, ನಿಯಾರ್ ದೇಕಾ ಎಂದು ಗುರುತಿಸಲಾಗಿದೆ. ಮುಖ್ಯಮಂತ್ರಿ ಹಿಮಾಂತ್ ಬಿಸ್ವ ಶರ್ಮಾ ಅವರು ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದು, ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.