ಲಖನೌ: ಉತ್ತರ ಪ್ರದೇಶದ 7 ಮಂದಿ ಮಾಜಿ ಶಾಸಕರು ಇಲ್ಲಿನ ಪೊಲೀಸರ ‘ಮೋಸ್ಟ್ ವಾಂಟೆಡ್‘ ಪಟ್ಟಿಯಲ್ಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೊಲೆ, ಸುಲಿಗೆ, ಭೂ ಕಬಳಿಕೆಯಂಥ ಗಂಭೀರ ಕ್ರಿಮಿನಲ್ ಅಪರಾಧಗಳಲ್ಲಿ ತೊಡಗಿಸಿಕೊಂಡಿರುವವರ ಹೆಸರನ್ನು ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿ ಸೇರಿಸಲಾಗಿದೆ.
ಇದರಲ್ಲಿ ಪ್ರಮುಖವಾಗಿ ಗ್ಯಾಂಗ್‌ಸ್ಟರ್ ರಾಜಕಾರಣಿ, ಇತ್ತೀಚೆಗೆ ಪೊಲೀಸರ ಕಾವಲಿನಲ್ಲೇ ದುಷ್ಕರ್ಮಿಗಳಿಂದ ಗುಂಡೇಟಿಗೆ ಬಲಿಯಾದ ಅತೀಕ್, ಮಾಜಿ ಎಂಎಲ್‌ಎ ವಿಜಯ್ ಮಿಶ್ರಾ, ಬಿಎಸ್‌ಪಿ ಪಕ್ಷದ ಮಾಜಿ ಎಂಎಲ್‌ಎ ಹಾಜಿ ಯಾಕೂಬ್ ಖುರೇಶಿ, ವಾರಣಾಸಿಯ ಮಾಜಿ ಎಂಎಲ್‌ಸಿ ಬ್ರಿಜೇಶ್ ಸಿಂಗ್, ಸಮಾಜವಾದಿ ಪಕ್ಷದ ಮಾಜಿ ಸಂಸದ ರಿಜ್ವಾನ್ ಜಾಹೀರ್, ಬಿಎಸ್‌ಪಿಯ ಮಾಜಿ ಎಂಎಲ್‌ಸಿ ಸಂಜೀವ ದ್ವಿವೇದಿ, ಗೊರಖ್‌ಪುರದ ಮಾಜಿ ಬ್ಲಾಕ್ ಪ್ರಮುಖರಾದ ಸುಧೀರ್ ಸಿಂಗ್ ಹಾಗೂ ದಿಲೀಪ್ ಮಿಶ್ರ ಅವರ ಹೆಸರುಗಳಿವೆ.
ಈ ಅಪರಾಧಿಗಳ ವಿರುದ್ಧ ಅವರ ಜಾತಿ, ಧರ್ಮ ಹಾಗೂ ಪ್ರದೇಶಗಳನ್ನು ನೋಡದೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಉತ್ತರ ಪ್ರದೇಶದ ಕಾನೂನು ಸುವ್ಯವಸ್ಥೆಯ ವಿಶೇಷ ಡಿಜಿ ಪ್ರಶಾಂತ್ ಕುಮಾರ್ ಅವರು ತಿಳಿಸಿದರು.
ಪಟ್ಟಿಯಲ್ಲಿ 66 ಜನರ ಹೆಸರುಗಳಿವೆ ಎಂದ ಕುಮಾರ್, ‘ಈ ಎಲ್ಲಾ ಅಪರಾಧಿಗಳ ಚಲನವಲನವನ್ನು ಡಿಜಿಪಿ ಪ್ರಧಾನ ಕಚೇರಿಯಿಂದ ಗಮನಿಸಲಾಗುತ್ತಿದೆ. ಇವರಲ್ಲಿ ಅತೀಕ್ ಮತ್ತು ಆದಿತ್ಯ ರಾಣಾ ಮೃತಪಟ್ಟಿದ್ದಾರೆ ಎಂದರು.
‘27 ಕ್ರಿಮಿನಲ್‌ಗಳು ಜೈಲಿನಲ್ಲಿದ್ದು, 5 ಜನರು ತಲೆಮರೆಸಿಕೊಂಡಿದ್ದಾರೆ. ಉಳಿದವರು ಜಾಮೀನಿನಲ್ಲಿದ್ದಾರೆ‘ ಎಂದೂ ತಿಳಿಸಿದರು.
ಹಿಂದಿನ ಸರ್ಕಾರಗಳ ಅವಧಿಯಲ್ಲಿ ಮಾಫಿಯಾ ಮತ್ತು ದರೋಡೆಕೋರರು ಅಪರಾಧಗಳನ್ನು ಸಂಭ್ರಮಿಸುತ್ತಿದ್ದು, ಇಂಥ ಕೃತ್ಯಗಳಿಗೆ ರಾಜಕೀಯ ಪ್ರೋತ್ಸಾಹವನ್ನು ಪಡೆಯುತ್ತಿದ್ದರು. ಆದರೆ ಯೋಗಿ ಆದಿತ್ಯನಾಥರ ಸರ್ಕಾರ ಇಂಥವರ ವಿರುದ್ಧ ದಮನಕಾರಿ ಕ್ರಮಕೈಗೊಂಡಿದೆ ಎಂದು ಉತ್ತರ ಪ್ರದೇಶ ಸರ್ಕಾರದ ವಕ್ತಾರರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.