ADVERTISEMENT

ಕೇರಳದಲ್ಲಿ ತಗ್ಗಿದ ಮಳೆ, ಸಾವಿನ ಸಂಖ್ಯೆ 70; ವಯನಾಡ್‌ ತಲುಪಿದ ರಾಹುಲ್ ಗಾಂಧಿ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2019, 10:30 IST
Last Updated 11 ಆಗಸ್ಟ್ 2019, 10:30 IST
   

ತಿರುವನಂತಪುರಂ: ಭಾರೀ ಮಳೆ ಮತ್ತು ಭೂಕುಸಿತದಿಂದ ಕೇರಳದಲ್ಲಿ ಸಾವಿಗೀಡಾದವರ ಸಂಖ್ಯೆ 70ಕ್ಕೇರಿದೆ.ಮಲಪ್ಪುರಂ ಜಿಲ್ಲೆಯ ನಿಲಂಬೂರ್ ಕವಳಪ್ಪಾರದಲ್ಲಿ ಇಲ್ಲಿಯವರೆಗೆ 11 ಮೃತದೇಹಗಳನ್ನು ಪತ್ತೆ ಹಚ್ಚಲಾಗಿದೆ. ವಯನಾಡ್ ಪುತ್ತುಮಲೆಯಲ್ಲಿ ಇಲ್ಲಿಯವರೆಗೆ 10 ಮೃತದೇಹಗಳನ್ನು ಮಣ್ಣಿನಡಿಯಿಂದ ಹೊರ ತೆಗೆಯಲಾಗಿದೆ.

ಇದೀಗ ಮಳೆ ತಗ್ಗಿರುವುದರಿಂದ ಕಣ್ಮರೆಯಾದ ಜನರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.ಕವಳಪ್ಪಾರದಲ್ಲಿ ಏಳು ವಯಸ್ಸಿನ ಬಾಲಕಿ ಅಲೀನಾಳ ಮೃತದೇಹ ಪತ್ತೆಯಾಗಿದೆ. ನಿನ್ನೆ 9 ಮಂದಿಯ ಮೃತದೇಹ ಪತ್ತೆಯಾಗಿದ್ದು,ಭಾನುವಾರ ಮೂರು ಮೃತದೇಹಗಳು ಪತ್ತೆಯಾಗಿವೆ.

ವಯನಾಡ್ ಪುತ್ತುಮಲೆಯಲ್ಲ ಭಾನುವಾರ ಬೆಳಗ್ಗೆಒಂದು ಮೃತದೇಹ ಪತ್ತೆಯಾಗಿದ್ದು, ಸಾವಿನ ಸಂಖ್ಯೆ 10ಕ್ಕೇರಿದೆ.

ಮಲಪ್ಪುರಂ ಕೋಟ್ಟುಕುನ್ನಿಲ್ ಕಣ್ಮರೆಯಾಗಿದ್ದ ನಾಲ್ವರಲ್ಲಿ ಇಬ್ಬರ ಮೃತದೇಹ ಪತ್ತೆಯಾಗಿದೆ.

ಮುಂಡೇರಿ ವಾಣಿಯಂಬುಳದಲ್ಲಿರುವ ಆದಿವಾಸಿ ಕಾಲನಿಯಲ್ಲಿ ಸಿಲುಕಿಕೊಂಡಿದ್ದ 200 ಆದಿವಾಸಿಗಳಿಗೆ ಸೇನೆ ಹೆಲಿಕಾಪ್ಟರ್ ಮೂಲಕ ಆಹಾರ ಒದಗಿಸಿದೆ.ಈ ಮಧ್ಯೆ ಆದಿವಾಸಿ ಕಾಲನಿಯ ಆರು ಮಂದಿ ಮಳೆ ನೀರಲ್ಲಿ ಈಜಿ ಮುಂಡೇರಿಗೆ ತಲುಪಿದ್ದಾರೆ.
ನಾಲ್ಕು ದಿನಗಳಿಂದ ವಾಣಿಯಂಬುಳ ಎಸ್ಟೇಟ್ ಮತ್ತು ನಾಲ್ಕು ಆದಿವಾಸಿ ಹಾಡಿಗಳಲ್ಲಿ 200ಕ್ಕಿಂತಲೂ ಹೆಚ್ಚು ಜನ ಸಿಲುಕಿದ್ದರು.ಎರಡು ದಿನಗಳಿಂದ ಇವರಿಗೆ ಆಹಾರ,ನೀರು ಸಿಗಲಿಲ್ಲ.

ಕುಂಬಳಪ್ಪಾರ ಆದಿವಾಸಿ ಕಾಲನಿಯಲ್ಲಿ 14 ಮನೆಗಳು ನಾಶವಾಗಿವೆ. ಇಲ್ಲಿ ಸೇನಾಪಡೆ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ನಿಲಂಬೂರ್ ಸೌತ್ ಡಿಎಫ್‍ಒ ಸಜಿ ಕುಮಾರ್, ನಾರ್ತ್ ಡಿಎಫ್ಒ ಯೋಗೇಶ್ ಅವರ ಜತೆ 25 ಸದಸ್ಯರ ತಂಡ ವಾಣಿಯಂಬುಳ ತಲುಪಿತ್ತು.

ವಯನಾಡ್‌ ತಲುಪಿದಸಂಸದ ರಾಹುಲ್ ಗಾಂಧಿ
ಕಾಂಗ್ರೆಸ್ ನೇತಾರ, ವಯನಾಡ್ ಸಂಸದ ರಾಹುಲ್ ಗಾಂಧಿ ಭಾನುವಾರ ವಯನಾಡ್‌ಗೆ ತಲುಪಿದ್ದಾರೆ.ಈ ಬಗ್ಗೆ ಭಾನುವಾರ ಬೆಳಗ್ಗೆ ಟ್ವೀಟ್ ಮಾಡಿದ ರಾಹುಲ್, ಮುಂದಿನ ಕೆಲವು ದಿನಗಳ ಕಾಲ ನಾನು ನನ್ನ ಲೋಕಸಭಾ ಕ್ಷೇತ್ರವಾದ ವಯನಾಡ್‌ನಲ್ಲಿರಲಿದ್ದೇನೆ, ವಯನಾಡಿನಾದ್ಯಂತವಿರುವ ಸಂತ್ರಸ್ತರ ಶಿಬಿರಕ್ಕೆ ಭೇಟಿ ನೀಡಿ ಪ್ರವಾಹ ಪರಿಹಾರ ಕ್ರಮಗಳ ಬಗ್ಗೆ ಜಿಲ್ಲೆ ಮತ್ತು ರಾಜ್ಯ ಅಧಿಕಾರಿಗಳೊಂದಿಗೆ ಅವಲೋಕನ ನಡೆಸಲಿದ್ದೇನೆ ಎಂದಿದ್ದಾರೆ.

ಚಿಹ್ನೆಗಳನ್ನು ಧರಿಸಿ ಶಿಬಿರಗಳಿಗೆ ಬರಬೇಡಿ: ಪಿಣರಾಯಿ ವಿಜಯನ್


ತಿರುವನಂತಪುರಂ: ಪ್ರತ್ಯೇಕ ಚಿಹ್ನೆ, ಸಂಕೇತಗಳನ್ನು ಧರಿಸಿ ಸಂತ್ರಸ್ತರ ಶಿಬಿರಕ್ಕೆ ಭೇಟಿ ನೀಡುವುದು ಬೇಡ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಸಂತ್ರಸ್ತರ ಶಿಬಿರಕ್ಕೆ ಬರುವಾಗ ಪ್ರತ್ಯೇಕ ಚಿಹ್ನೆಗಳೇನೂ ಬೇಡ. ಅಲ್ಲಿ ಭೇಟಿ ನೀಡುವವರು ಶಿಸ್ತು ಪಾಲಿಸಬೇಕು.ಎಲ್ಲರೂ ಶಿಬಿರದ ಒಳಗೆ ಹೋಗಬಾರದು.ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗುವಂತೆ ಕೆಲವರು ಪ್ರಚಾರ ಮಾಡುತ್ತಿದ್ದಾರೆ. ಇದು ನಮ್ಮ ರಾಜ್ಯದೊಂದಿಗೆ ಮಾಡುವ ಹೀನ ಕೆಲಸ ಎಂದಿದ್ದಾರೆಪಿಣರಾಯಿ.

ಮಳೆ ಕಡಿಮೆಯಾಗಿದ್ದರಿಂದ ಸ್ವಲ್ಪ ನೆಮ್ಮದಿ ಇದೆ. ಪ್ರವಾಹ ಪರಿಸ್ಥಿತಿ ಎದುರಿಸಲು ಜನರು ಮುಂದೆ ಬಂದಿದ್ದಾರೆ. ಕಣ್ಣೂರು, ಕಾಸರಗೋಡು ಮತ್ತು ವಯನಾಡು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಇದೆ.ಇದನ್ನು ಗಂಭೀರವಾಗಿಯೇ ಪರಿಗಣಿಸಬೇಕು, ಇನ್ನೆರಡು ದಿನ ಅಧಿಕ ಪ್ರಮಾಣ ಮಳೆ ಸಾಧ್ಯತೆ ಇದೆ.ಜನರು ಜಾಗರೂರತೆಯಿಂದ ಇರಬೇಕು.

ಮಲೆನಾಡುಗಳಲ್ಲಿ ಹೆಚ್ಚಿನ ನಾಶನಷ್ಟ ಸಂಭವಿಸಿದೆ. ಭಾನುವಾರ ಬೆಳಗ್ಗೆ 9 ಗಂಟೆವರೆಗೆ 60 ಮಂದಿ ಸಾವಿಗೀಡಾಗಿದ್ದಾರೆ ಎಂದು ಅಂಕಿ ಅಂಶಗಳು ಸೂಚಿಸುತ್ತಿವೆ.1551 ಸಂತ್ರಸ್ತರ ಶಿಬರಗಳಲ್ಲಿ 65548 ಕುಟುಂಬಗಳಿವೆ.ಶೋಳಯಾರ್ ಜಲಾಶಯ ತೆರೆದರೆ ಚಾಲಕ್ಕುಡಿ ನದಿ ತೀರದ ಜನರು ಎಚ್ಚರ ವಹಿಸಬೇಕು.

ವಯನಾಡಿನಲ್ಲಿ ಮಳೆ ಕಡಿಮೆಯಾಗುತ್ತದೆ.ಆದರೆ ಮಲೆ ಪ್ರದೇಶಗಳಲ್ಲಿ ಮಳೆ ಇನ್ನಷ್ಟು ತೀವ್ರವಾಗುವ ಸಾಧ್ಯತೆ ಇದೆ.ಆಹಾರ ಸಾಮಾಗ್ರಿಗಳನ್ನು ಸಂಗ್ರಹಿಸಿ ಶಿಬಿರಗಳಿಗೆ ತಲುಪಿಸುವ ಬದಲು ಆಯಾ ಜಿಲ್ಲೆಗಳ ಕಲೆಕ್ಟಿಂಗ್ ಸೆಂಟರ್‌ಗೆ ತಲುಪಿಸಿದರೆ ಸಾಕು.
ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಲು, ಜನರು, ಸಂಘಟನೆಗಳು ಮುಂದಾಗಿದ್ದು ಅವರು ಮಾಡುತ್ತಿರುವ ಕೆಲಸ ಅಭಿನಂದನಾರ್ಹ ಎಂದು ಪಿಣರಾಯಿ ವಿಜಯನ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.