ADVERTISEMENT

ಒಡಿಶಾ: ವೃದ್ಧಾಪ್ಯ ವೇತನಕ್ಕಾಗಿ 2 ಕಿ.ಮೀ ತೆವಳಿದ ಮಹಿಳೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2024, 16:13 IST
Last Updated 24 ಸೆಪ್ಟೆಂಬರ್ 2024, 16:13 IST
-
-   

ಕ್ಯೊಂಜಾರ್ (ಒಡಿಶಾ): ಜಿಲ್ಲೆಯ ರಾಯ್‌ಸುವಾನ್ ಗ್ರಾಮದ 70 ವರ್ಷದ ಮಹಿಳೆಯೊಬ್ಬರು ವೃದ್ಧಾಪ್ಯ ವೇತನ ಪಡೆಯುವುದಕ್ಕಾಗಿ  ತನ್ನ ಮನೆಯಿಂದ ಪಂಚಾಯಿತಿ ಕಚೇರಿವರೆಗೆ 2 ಕಿ.ಮೀ.ನಷ್ಟು ತೆವಳಿಕೊಂಡೇ ಹೋಗಿದ್ದಾರೆ.

ಕಾಯಿಲೆಯಿಂದಾಗಿ ನಡೆಯಲು ಆಗದ ಕಾರಣ, ಗ್ರಾಮದ ಪಥೂರಿ ದೆಹುರಿ ಎಂಬ ಮಹಿಳೆ ತೆವಳಿಕೊಂಡು ಹೋಗಿದ್ದಾರೆ. ಈ ಕುರಿತ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

ಈ ಗ್ರಾಮ ಪಂಚಾಯಿತಿಯು ಮುಖ್ಯಮಂತ್ರಿ ಮೋಹನ್ ಚರಣ್‌ ಮಾಝಿ ಅವರ ತವರು ಜಿಲ್ಲೆ ಕ್ಯೊಂಜಾರ್‌ನ ತೆಲ್ಕೋಯಿ ತಾಲ್ಲೂಕಿನಲ್ಲಿದೆ.

ADVERTISEMENT

ಈ ಕುರಿತು ಪ್ರತಿಕ್ರಿಯಿಸಿರುವ ಪಂಚಾಯಿತಿ ಸದಸ್ಯ ಬಗುನ್ ಚಂಪಿಯಾ, ‘ವೃದ್ಧೆ ತೆವಳುತ್ತಾ ಹೋಗುತ್ತಿದ್ದ ದೃಶ್ಯಗಳನ್ನು ಟಿವಿಗಳಲ್ಲಿ ನೋಡಿದೆ. ಪತ್ರಿಕೆಗಳಲ್ಲಿ ಪ್ರಕಟಗೊಂಡ ಚಿತ್ರಗಳನ್ನೂ ನೋಡಿ, ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿರುವೆ’ ಎಂದಿದ್ದಾರೆ.

‘ವಯೋಸಹಜ ಕಾಯಿಲೆಗಳಿಂದಾಗಿ ಮಹಿಳೆ ನಡೆಯಲು ಅಸಮರ್ಥಳಾಗಿದ್ದಾರೆ ಎಂಬುದನ್ನು ಗ್ರಾಮಸ್ಥರೊಂದಿಗೆ ಮಾತನಾಡಿ ಖಚಿತಪಡಿಸಿಕೊಂಡಿರುವೆ’ ಎಂದೂ ಹೇಳಿದ್ದಾರೆ.

‘ವೃದ್ಧಾಪ್ಯ ವೇತನವನ್ನು ಈ ಹಿಂದೆ ದೆಹುರಿ ಅವರ ಬ್ಯಾಂಕ್‌ ಖಾತೆಗೆ ಜಮಾ ಮಾಡಲಾಗಿತ್ತು. ಕಾಯಿಲೆ ಕಾರಣ ಬ್ಯಾಂಕಿಗೆ ಹೋಗಲು ಆಕೆಗೆ ಸಾಧ್ಯವಾಗದ ಕಾರಣ, ಸ್ಥಳೀಯ ಆಡಳಿತವು ವೃದ್ಧಾಪ್ಯವೇತನವನ್ನು ನೇರವಾಗಿ ಮಹಿಳೆಗೆ ವಿತರಿಸಲು ಆರಂಭಿಸಿತ್ತು’ ಎಂದು ಬಿಡಿಒ ಗೀತಾ ಮುರ್ಮು ಹೇಳಿದ್ದಾರೆ.

‘ದೆಹುರಿ ಅವರ ಮನೆಗೇ ತೆರಳಿ ವೃದ್ಧಾಪ್ಯ ವೇತನ ನೀಡುವಂತೆ ಪಂಚಾಯಿತಿ ಅಧಿಕಾರಿಗೆ ಸೂಚಿಸಲಾಗಿದೆ. ಮಹಿಳೆಗೆ ಗಾಲಿ ಕುರ್ಚಿಯನ್ನು ಸಹ ಒದಗಿಸಲಾಗಿದೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.