ADVERTISEMENT

ತಪ್ಪಿತಸ್ಥ ಆನ್‌ಲೈನ್‌ನಲ್ಲಿ ಪರೀಕ್ಷೆ ಬರೆಯಬಹುದೆ:ಮುಂಬೈ ವಿವಿಗೆ ಕೋರ್ಟ್ ಪ್ರಶ್ನೆ

ಪಿಟಿಐ
Published 12 ಮೇ 2024, 14:15 IST
Last Updated 12 ಮೇ 2024, 14:15 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಮುಂಬೈ: ‘2006ರಲ್ಲಿ ಮುಂಬೈ ಸ್ಥಳೀಯ ರೈಲುಗಳ ಬೋಗಿಗಳಲ್ಲಿ ನಡೆದ ಸರಣಿ ಸ್ಫೋಟ ಪ್ರಕರಣದ ಅಪರಾಧಿಗೆ ಆನ್‌ಲೈನ್ ಮೂಲಕ ಕಾನೂನು ಪರೀಕ್ಷೆ ಬರೆಯಲು ಅವಕಾಶ ನೀಡಬಹುದೇ’ ಎಂದು ಮುಂಬೈ ವಿಶ್ವವಿದ್ಯಾಲಯಕ್ಕೆ ಬಾಂಬೆ ಹೈಕೋರ್ಟ್ ಪ್ರಶ್ನಿಸಿದೆ.  

ಈ ಕುರಿತು ಶುಕ್ರವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮಕರಂದ್ ಕಾರ್ಣಿಕ್ ಅವರಿದ್ದ ವಿಭಾಗೀಯ ಪೀಠವು, ಭದ್ರತಾ ಕಾರಣಗಳಿಂದಾಗಿ ಸರಣಿ ಬಾಂಬ್ ಸ್ಫೋಟದ ಅಪರಾಧಿ ಮೊಹಮ್ಮದ್ ಸಾಜಿದ್ ಮಾರ್ಘೂಬ್ ಅನ್ಸಾರಿಗೆ ಆನ್‌ಲೈನ್ ಮೂಲಕ ಪರೀಕ್ಷೆ ಬರೆಯಲು ಅವಕಾಶ ನೀಡಬಹುದೇ ಎಂಬುದನ್ನು ತಿಳಿಸುವಂತೆ ವಿಶ್ವವಿದ್ಯಾಲಯವನ್ನು ಕೇಳಿದರು.   

ADVERTISEMENT

ಈ ಪ್ರಕರಣದಲ್ಲಿ ಅನ್ಸಾರಿ ಮತ್ತು ಇತರರು ಅಪರಾಧಿಗಳು ಎಂದು ಸಾಬೀತಾಗಿತ್ತು. ಅನ್ಸಾರಿಯು, ಸಿದ್ಧಾರ್ಥ ಕಾನೂನು ಕಾಲೇಜಿನಲ್ಲಿ ಮೇ 3ರಿಂದ ಮೇ 15ರವರೆಗೆ ನಡೆಯಲಿರುವ ಎರಡನೇ ಸೆಮಿಸ್ಟರ್ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು ಎಂದು ಕೋರಿದರು. ಈ ವೇಳೆ, ಅನ್ಸಾರಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಿದ್ದ ನ್ಯಾಯಾಲಯವು, ಇದಕ್ಕೆ ಅಗತ್ಯವಿರುವ ಕ್ರಮ ಕೈಗೊಳ್ಳುವಂತೆ ನಾಸಿಕ್ ಕೇಂದ್ರೀಯ ಕಾರಾಗೃಹದ ಅಧಿಕಾರಿಗಳಿಗೆ ಸೂಚಿಸಿತ್ತು. 

ಆದರೆ, ಮೇ 3ರಿಂದ 9ರವರೆಗಿನ ಪರೀಕ್ಷೆಗಳಿಗೆ ಹಾಜರಾಗಲು ತನ್ನಿಂದ ಸಾಧ್ಯವಾಗಿಲ್ಲ ಎಂದು ಅನ್ಸಾರಿ ಮತ್ತೆ ಕೋರ್ಟ್ ಮೆಟ್ಟಿಲೇರಿದ್ದ. ಇದಕ್ಕೆ ಉತ್ತರಿಸಿದ್ದ ಪ್ರಾಸಿಕ್ಯೂಷನ್, ನಾಸಿಕ್ ಕಾರಾಗೃಹದ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಂಡ ಹೊರತಾಗಿಯೂ, ಆತನನ್ನು ಸರಿಯಾದ ಸಮಯಕ್ಕೆ ಕಾಲೇಜಿಗೆ ಕರೆದೊಯ್ಯಲಾಗಲಿಲ್ಲ ಎಂದು ಹೇಳಿತ್ತು. 

ಈ ಹಿನ್ನೆಲೆಯಲ್ಲಿ ಈ ಕುರಿತು ಜೂನ್ 5ರ ಒಳಗೆ ಪ್ರಮಾಣಪತ್ರ ಸಲ್ಲಿಸುವಂತೆ ಕಾರಾಗೃಹದ ಅಧಿಕಾರಿಗೆ ಸೂಚಿಸಿರುವ ನ್ಯಾಯಾಲಯವು, ಈ ಕುರಿತ ಮುಂದಿನ ವಿಚಾರಣೆಯನ್ನು ಜೂನ್ 10ಕ್ಕೆ ನಿಗದಿಪಡಿಸಿದೆ. 

2006ರ ಜುಲೈ 11ರಂದು ಮುಂಬೈ ಸ್ಥಳೀಯ ರೈಲುಗಳ ಬೋಗಿಗಳಲ್ಲಿ ನಡೆದ ಸ್ಫೋಟದಲ್ಲಿ 189 ಮಂದಿ ಮೃತಪಟ್ಟಿದ್ದರು. 824 ಮಂದಿ ಗಾಯಗೊಂಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.