ನವದೆಹಲಿ: ಬೆಂಗಳೂರಿನಲ್ಲಿ 72 ಮಂದಿ ರೊಹಿಂಗ್ಯಾ ಸಮುದಾಯದವರು ವಾಸಿಸುತ್ತಿರುವುದನ್ನು ಗುರುತಿಸಲಾಗಿದೆ ಎಂದು ಬಿಜೆಪಿ ನೇತೃತ್ವದ ಕರ್ನಾಟಕ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದು, ಕೂಡಲೇ ಅವರನ್ನು ಗಡಿಪಾರು ಮಾಡುವ ಉದ್ದೇಶವಿಲ್ಲ ಎಂದು ಹೇಳಿದೆ.
'ಬೆಂಗಳೂರು ನಗರ ಪೊಲೀಸರು ಗುರುತಿಸಲಾಗಿರುವ ರೊಹಿಂಗ್ಯಾ ಸಮುದಾಯದವರನ್ನು ಯಾವುದೇ ಶಿಬಿರ ಅಥವಾ ಬಂಧನ ಕೇಂದ್ರಗಳಲ್ಲಿ ಇರಿಸಿಲ್ಲ. ಆದರೆ, ಬೆಂಗಳೂರು ನಗರದಲ್ಲಿ ಗುರುತಿಸಲಾಗಿರುವ 72 ಜನ ರೊಹಿಂಗ್ಯಾ ಸಮುದಾಯದವರು ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಪೊಲೀಸರು ಯಾವುದೇ ಒತ್ತಾಯದ ಕ್ರಮಗಳನ್ನು ಅವರ ವಿರುದ್ಧ ತೆಗೆದುಕೊಂಡಿಲ್ಲ ಹಾಗೂ ಅವರನ್ನು ಕೂಡಲೇ ಗಡಿಪಾರು ಮಾಡುವ ಯೋಜನೆ ಇಲ್ಲ' ಎಂದು ತಿಳಿಸಿದೆ.
ಬೆಂಗಳೂರು ನಗರದ ಈಶಾನ್ಯ ಭಾಗದಲ್ಲಿ ವಾಸಿಸುತ್ತಿರುವ ರೊಹಿಂಗ್ಯಾ ವಲಸಿಗರ ಹೆಸರುಗಳನ್ನು ಸರ್ಕಾರವು ನೀಡಿದೆ. 12 ವರ್ಷಕ್ಕಿಂತ ಕಡಿಮೆ ವಯಸ್ಸಿನವರನ್ನು ಹೊರತು ಪಡಿಸಿ ರೊಹಿಂಗ್ಯ ಸಮುದಾಯದ ಉಳಿದ ಎಲ್ಲರಿಗೂ ವಿಶ್ವಸಂಸ್ಥೆಯ ಅಂಗ ಸಂಸ್ಥೆಯಾದ ನಿರಾಶ್ರಿತರ ಹೈಕಮಿಷನರ್ ಕಚೇರಿಯು (ಯುಎನ್‌ಎಚ್‌ಸಿಆರ್) ಪ್ರತ್ಯೇಕ ಸಂಖ್ಯೆಗಳನ್ನು ನೀಡಿದೆ.
ಅಕ್ರಮ ರೊಹಿಂಗ್ಯಾ ವಲಸಿಗರನ್ನು ಗಡಿಪಾರು ಮಾಡಲು ನಿರ್ದೇಶನ ನೀಡುವಂತೆ ಬಿಜೆಪಿ ಮುಖಂಡ ಮತ್ತು ಅಡ್ವೊಕೇಟ್ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಸಲ್ಲಿಸಿದ್ದರು. ಅದಕ್ಕೆ ರಾಜ್ಯ ಸರ್ಕಾರವು ಲಿಖಿತ ರೂಪದಲ್ಲಿ ಪ್ರತಿಕ್ರಿಯೆ ಸಲ್ಲಿಸಿತ್ತು.
ಅಡ್ವೊಕೇಟ್ ವಿ.ಎನ್.ರಘುಪತಿ ಅವರ ಮೂಲಕ ಸರ್ಕಾರವು ಆಕ್ಷೇಪಣೆ ಸಲ್ಲಿಸಿದ್ದು, ಗಡಿಪಾರು ಮಾಡುವಂತೆ ನಿರ್ದೇಶಿಸಲು ಸಲ್ಲಿಕೆಯಾಗಿರುವ ಮನವಿಯನ್ನು ವಜಾಗೊಳಿಸುವಂತೆ ಕೋರಿದೆ.
'ಒಂದು ವರ್ಷದೊಳಗೆ ಬಾಂಗ್ಲಾದೇಶಿ ಮತ್ತು ರೊಹಿಂಗ್ಯಾ ಅಕ್ರಮ ವಲಸಿಗರು, ನುಸುಳುಕೋರರನ್ನು ಗುರುತಿಸಬೇಕು, ಬಂಧಿಸಬೇಕು ಹಾಗೂ ಅವರನ್ನು ಗಡಿಪಾರು ಮಾಡಬೇಕು. ಈ ಬಗ್ಗೆ ಕೇಂದ್ರ, ರಾಜ್ಯ ಸರ್ಕಾರಗಳಿಗೆ ಸೂಚಿಸಬೇಕು. ಅಕ್ರಮ ವಲಸೆ ಮತ್ತು ನುಸುಳುಕೋರತನದ ವಿರುದ್ಧ ಜಾಮೀನು ರಹಿತ ಹಾಗೂ ಗಂಭೀರ ಪ್ರಕರಣವಾಗಿ ಪರಿಗಣಿಸಲು ಕಾನೂನು ತಿದ್ದುಪಡಿ ಮಾಡಲು ನಿರ್ದೇಶನ ನೀಡಬೇಕು' ಎಂದು ಉಪಾಧ್ಯಾಯ ಅವರು ಕೋರ್ಟ್‌ಗೆ ಮನವಿ ಮಾಡಿದ್ದಾರೆ.
ನಕಲಿ ಪ್ಯಾನ್ ಮತ್ತು ಆಧಾರ್ ಕಾರ್ಡ್, ಪಾಸ್‌ಪೋರ್ಟ್, ರೇಷನ್ ಹಾಗೂ ಮತದಾನ ಗುರುತಿನ ಚೀಟಿ ಸೇರಿದಂತೆ ಇತರೆ ದಾಖಲೆಗಳನ್ನು ಸೃಷ್ಟಿಸಿಕೊಳ್ಳುವುದು ಸಹ ಜಾಮೀನು ರಹಿತ, ಗಂಭೀರವಾದ ಹಾಗೂ ಕ್ರಮಕೈಗೊಳ್ಳಬೇಕಾದ ಅಪರಾಧವಾಗಿದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.