ಲಖನೌ: ‘ಅಕ್ರಮವಾಗಿ ದೇಶದಲ್ಲಿ ನೆಲೆಸಿರುವ ಆರೋಪದಡಿ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್)ದಿಂದ ಉತ್ತರ ಪ್ರದೇಶದ ವಿವಿಧ ಪ್ರದೇಶಗಳಲ್ಲಿ 74 ರೋಹಿಂಗ್ಯಾ ಮುಸ್ಲಿಮರನ್ನು ಸೋಮವಾರ ಬಂಧಿಸಿದ್ದಾರೆ’ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ರೋಹಿಂಗ್ಯಾಗಳು ರಾಜ್ಯದ ವಿವಿಧ ಪ್ರದೇಶಗಳಲ್ಲಿ ನೆಲೆಸಿರುವ ಖಚಿತ ಮಾಹಿತಿ ಆಧರಿಸಿ ಸ್ಥಳೀಯ ಪೊಲೀಸರ ನೆರವಿನೊಂದಿಗೆ ಎಟಿಎಸ್ ದಾಳಿ ನಡೆಸಿತ್ತು. ಅಕ್ರಮವಾಗಿ ನೆಲೆಸಿರುವವರನ್ನು ಬಂಧಿಸಲಾಗಿದೆ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ವಿಶೇಷ ಪೊಲೀಸ್ ನಿರ್ದೇಶಕ ಪ್ರಶಾಂತ್ ಕುಮಾರ್ ಪ್ರಕಟಣೆಯಲ್ಲಿ ಹೇಳಿದ್ದಾರೆ.
‘ಬಂಧಿತರಲ್ಲಿ ಐವರು ಮಕ್ಕಳು ಹಾಗೂ 16 ಮಹಿಳೆಯರೂ ಇದ್ದಾರೆ. ಎಫ್‌ಐಆರ್ ದಾಖಲಾಗಿದೆ. ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಒಟ್ಟು 31 ರೋಹಿಂಗ್ಯಾಗಳು ಮಥುರಾದಲ್ಲಿ ಇದ್ದರು. ಅಲಿಘಡ್‌ನಲ್ಲಿ 17, ಹಾಪುರದಲ್ಲಿ 16, ಘಾಜಿಯಾಬಾದ್ ಹಾಗೂ ಮೀರತ್‌ನಲ್ಲಿ ತಲಾ 4 ಹಾಗೂ ಶಹರಣ್‌ಪುರ್‌ನಲ್ಲಿ ಇಬ್ಬರನ್ನು ಬಂಧಿಸಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.
ಮ್ಯಾನ್ಮಾರ್ ಸೇನೆ ಕಾರ್ಯಾಚರಣೆ ನಡೆಸಿದ ಪರಿಣಾಮ ನೂರಾರು ರೋಹಿಂಗ್ಯಾ ಮುಸ್ಲಿಮರು ಮನೆಗಳನ್ನು ತೊರೆದು ವಸಲೆ ಹೋಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.