ADVERTISEMENT

74ನೇ ವರ್ಷಕ್ಕೆ ಅವಳಿ ಮಕ್ಕಳಿಗೆ ಜನ್ಮ

ವಿಶ್ವದಲ್ಲೇ ಹಿರಿಯ ತಾಯಿ ಎನ್ನುವ ಖ್ಯಾತಿ

ಪಿಟಿಐ
Published 5 ಸೆಪ್ಟೆಂಬರ್ 2019, 20:00 IST
Last Updated 5 ಸೆಪ್ಟೆಂಬರ್ 2019, 20:00 IST
ಪತಿ ರಾಜರಾಮ್ ಜತೆ ಮಾಂಗಯಮ್ಮ
ಪತಿ ರಾಜರಾಮ್ ಜತೆ ಮಾಂಗಯಮ್ಮ   

ಅಮರಾವತಿ (ಎಪಿ) (ಪಿಟಿಐ): ಮಗು ಪಡೆಯಬೇಕೆಂಬುದು ಈ ದಂಪತಿಯ ಐದು ದಶಕಗಳ ಕನಸು. ಕೊನೆಗೂ 74ನೇ ವಯಸ್ಸಿನಲ್ಲಿ ಅದು ನನಸಾಗಿದೆ. ಜತೆಗೆ, ವಿಶ್ವದಲ್ಲೇ ಹಿರಿಯ ತಾಯಿ ಎನ್ನುವ ದಾಖಲೆಯನ್ನು ಸ್ಥಾಪಿಸಿದ್ದಾರೆ.

ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿರುವುದು ದಂಪತಿ ಖುಷಿಯನ್ನು ದುಪ್ಪಟ್ಟಾಗಿಸಿದೆ.ಬಂಜೆತನ ನಿವಾರಣಾ ಚಿಕಿತ್ಸೆ (ಐವಿಎಫ್‌) ಮೂಲಕ ಅವರು ಮಕ್ಕಳನ್ನು ಪಡೆದಿದ್ದಾರೆ.

ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ದ್ರಾಕ್ಷರಮಮ್‌ನ ಇ. ರಾಜಾ ರಾವ್‌ ಮತ್ತು ಮಾಂಗಯಮ್ಮ 1962ರಲ್ಲಿ ವಿವಾಹವಾಗಿದ್ದರು. ಆದರೆ, ಸಂತಾನ ಭಾಗ್ಯ ದೊರೆಯಲಿಲ್ಲ ಎನ್ನುವ ಕೊರಗು ಅವರನ್ನು ಕಾಡುತ್ತಿತ್ತು. ಪಕ್ಕದ ಮನೆಯ ಮಹಿಳೆಯೊಬ್ಬರು ಇನ್ ವಿಟ್ರೊ ಫರ್ಟಿಲೈಜೇಶನ್ (ಐವಿಎಫ್‌) ತಂತ್ರಜ್ಞಾನದ ಮೊರೆ ಹೋಗಿದ್ದರು. ಐವಿಎಫ್‌ ಮೂಲಕ 55 ವರ್ಷಕ್ಕೆ ಮಗು ಪಡೆದಿದ್ದರು. ಇದರಿಂದ ತಾಯಿಯಾಗುವ ಭರವಸೆ ಮೂಡಿ, ಇವರು ಐವಿಎಫ್‌ ಚಿಕಿತ್ಸೆ ಮೂಲಕ ಮಗು ಪಡೆಯಲು ಮುಂದಾದರು.

ADVERTISEMENT

‘2006 ರಲ್ಲಿ ಸ್ಪೇನ್‌ ಮೂಲದ 66 ವರ್ಷದ ಮಹಿಳೆ ಮಗುವಿಗೆ ಜನ್ಮ ನೀಡುವ ಮೂಲಕ ವಿಶ್ವದ ಹಿರಿತಾಯಿ ಎಂಬ ಗಿನ್ನೆಸ್‌ ದಾಖಲೆ ಮಾಡಿದ್ದರು. ಆ ಸ್ಥಾನ ಈಗ ಮಾಂಗಯಮ್ಮ ಪಾಲಾಗಿದೆ’ ಎಂದು ವೈದ್ಯರು ಸಂತಸ ವ್ಯಕ್ತಪಡಿಸಿದ್ದಾರೆ.

ಗುಂಟೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಾಂಗಯಮ್ಮ ಅವರಿಗೆ ಹೆರಿಗೆಯಾಗಿದೆ.

1999 ರಿಂದ 2004ರ ಅವಧಿಯಲ್ಲಿ ಚಂದ್ರಬಾಬು ನಾಯ್ಡು ಅವರ ಸರ್ಕಾರದಲ್ಲಿ ಆರೋಗ್ಯ ಸಚಿವೆ ಆಗಿದ್ದ ಸ್ತ್ರೀರೋಗ ತಜ್ಞೆ ಡಾ. ಅರುಣಾ ಬಳಿ ಕಳೆದ ನವೆಂಬರ್‌ನಲ್ಲಿ ದಂಪತಿ ಚಿಕಿತ್ಸೆಗೆ ತೆರಳಿದ್ದರು.

ಜನವರಿಯಲ್ಲಿ ಮಾಂಗಯಮ್ಮ ಗರ್ಭ ಧರಿಸಿದ್ದರು. ವಯಸ್ಸಾದ್ದರಿಂದ ಹೆಚ್ಚಿನ ಮುತುವರ್ಜಿ ಅಗತ್ಯವಿದ್ದ ಕಾರಣದಿಂದ ಆಸ್ಪತ್ರೆಯಲ್ಲಿಯೇ ಇರಿಸಲಾಗಿತ್ತು. ತಜ್ಞ ವೈದ್ಯರು ಅವರ ಆರೋಗ್ಯದ ಕಾಳಜಿ ವಹಿಸಿದ್ದರು.

‘ಮಗು, ತಾಯಿ ಆರೋಗ್ಯವಾಗಿದ್ದಾರೆ. ವಯಸ್ಸಿನ ಕಾರಣದಿಂದ ಸಿಜೇರಿಯನ್‌ ಮಾಡಲಾಗಿದೆ’ ಎಂದು ವೈದರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.