ನವದೆಹಲಿ:ಕಳೆದ ಮೂರು ವರ್ಷಗಳಲ್ಲಿ ಪರೀಕ್ಷೆಗೊಳಪಡಿಸಿದ ಒಟ್ಟು84,874 ಔಷಧಗಳ ಮಾದರಿಗಳ ಪೈಕಿ 7,700 ಮಾದರಿಗಳನ್ನು ಕಳಪೆ ಗುಣಮಟ್ಟದವು ಮತ್ತು 670 ಮಾದರಿಗಳನ್ನು ಕಲಬೆರಕೆ ಎಂದುಘೋಷಿಸಲಾಗಿದೆ.
ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಅಂಕಿ–ಅಂಶಗಳ ಪ್ರಕಾರ, 2020–21ರಲ್ಲಿ2,652 ಔಷಧ ಮಾದರಿಗಳು ಕಳಪೆ ಗುಣಮಟ್ಟದವು ಹಾಗೂ 263 ಮಾದರಿಗಳು ಕಲಬೆರಕೆ ಎಂದುಘೋಷಿಸಲಾಗಿತ್ತು.
ನಕಲಿ ಮತ್ತು ಕಲಬೆರಕೆ ಎಂದು ಗುರುತಿಸಲಾದ ಔಷಧ ಮಾದರಿಗಳಿಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲಾಗಿದೆ. ಅದರಂತೆ 2020–21ರಲ್ಲಿ 164 ಮಂದಿಯನ್ನು ಬಂಧಿಸಲಾಗಿದ್ದು, ಕಳೆದ ಮೂರು ವರ್ಷಗಳಲ್ಲಿ 500ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ.
ದೇಶದಲ್ಲಿ ಔಷಧಗಳ ತಯಾರಿಕೆ, ಮಾರಾಟ ಮತ್ತು ವಿತರಣೆಯನ್ನು 'ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಆಕ್ಟ್, 1940' ಮತ್ತು'ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ನಿಯಮ 1945'ರ ನಿಬಂಧನೆಗಳ ಅಡಿಯಲ್ಲಿ ನಿಯಂತ್ರಿಸಲಾಗುತ್ತದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಶುಕ್ರವಾರ ಲೋಕಸಭೆಯಲ್ಲಿ ಮಾಹಿತಿ ನೀಡಿದೆ.
ದೇಶದಲ್ಲಿ ಔಷಧ ತಯಾರಿಕೆ, ಮಾರಾಟ ಮತ್ತು ವಿತರಣೆಯು ವಿವಿಧ ರಾಜ್ಯ ಸರ್ಕಾರಗಳು ನೇಮಿಸಿರುವ ರಾಜ್ಯಪರವಾನಗಿ ಪ್ರಾಧಿಕಾರಗಳ (ಎಸ್‌ಎಲ್‌ಎ) ಪರವಾನಗಿ ಮತ್ತು ತಪಾಸಣೆ ವ್ಯವಸ್ಥೆಯ ಮೂಲಕ ನಿರ್ವಹಿಸಲಾಗುತ್ತದೆ. ಪರವಾನಗಿ ಷರತ್ತುಗಳ ಉಲ್ಲಂಘನೆಯಾದರೆ, ಕಾನೂನು ಕ್ರಮ ಕೈಗೊಳ್ಳುವ ಅಧಿಕಾರ ಎಸ್‌ಎಲ್‌ಎಗಳಿಗೆ ಇರುತ್ತದೆ.
ಕಳಪೆ ಔಷಧ, ಕಲಬೆರಕೆ ಪ್ರಕರಣಗಳಲ್ಲಿ ಆಯಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ ಔಷಧ ನಿಯಂತ್ರಕಗಳು ಕ್ರಮ ಕೈಗೊಳ್ಳುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.