ನವದೆಹಲಿ: ಸರ್ಕಾರಿ ನೌಕರಿಗಳಲ್ಲಿ ಮೀಸಲಾತಿ ವಿರೋಧಿಸಿ ನೆರೆಯ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ನಡುವೆ ವಿವಿಧ ಭೂ ಸಾರಿಗೆ ಕೇಂದ್ರಗಳ ಮೂಲಕ ಒಟ್ಟು 778 ಭಾರತೀಯ ವಿದ್ಯಾರ್ಥಿಗಳು ಬಾಂಗ್ಲಾದೇಶದಿಂದ ಭಾರತಕ್ಕೆ ಮರಳಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ(MEA) ಶನಿವಾರ ತಿಳಿಸಿದೆ.
ಬಾಂಗ್ಲಾದೇಶದಲ್ಲಿರುವ ಭಾರತೀಯ ರಾಯಭಾರ ಕಚೇರಿಗಳು ಭಾರತೀಯ ಪ್ರಜೆಗಳು ಮತ್ತು ವಿದ್ಯಾರ್ಥಿಗಳ ಸುರಕ್ಷತೆಗಾಗಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿವೆ ಎಂದು ಎಂಇಎ ಹೇಳಿದೆ.
ಈವರೆಗೆ 778 ಭಾರತೀಯ ವಿದ್ಯಾರ್ಥಿಗಳು ಭೂ ಸಾರಿಗೆ ಮೂಲಕ ದೇಶಕ್ಕೆ ಮರಳಿದ್ದಾರೆ. ಜೊತೆಗೆ ಹೆಚ್ಚುವರಿಯಾಗಿ ಸುಮಾರು 200 ವಿದ್ಯಾರ್ಥಿಗಳು ಢಾಕಾ ಮತ್ತು ಚಿತ್ತಗಾಂಗ್ ವಿಮಾನ ನಿಲ್ದಾಣಗಳಿಂದ ದೇಶಕ್ಕೆ ಮರಳಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.
ಸರ್ಕಾರಿ ನೌಕರಿಗಳಲ್ಲಿ ಮೀಸಲಾತಿ ವಿರೋಧಿಸಿ ಶೇಖ್ ಹಸೀನಾ ನೇತೃತ್ವದ ಸರ್ಕಾರದ ವಿರುದ್ಧ ವಾರದ ಹಿಂದೆ ಆರಂಭಗೊಂಡಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಕಳೆದೊಂದು ವಾರದಲ್ಲಿ ಸಂಘರ್ಷದಲ್ಲಿ ಮೃತಪಟ್ಟವರ ಸಂಖ್ಯೆ 105ಕ್ಕೆ ಏರಿಕೆಯಾಗಿದೆ.
ಬಾಂಗ್ಲಾದೇಶದಲ್ಲಿ ಸುಮಾರು 15,000 ಭಾರತೀಯ ಪ್ರಜೆಗಳು ಇದ್ದಾರೆ ಎಂದು ಅಂದಾಜಿಸಲಾಗಿದೆ ಎಂದು ಎಂಇಎ ವಕ್ತಾರ ರಣಧೀರ್ ಜೈಸ್ವಾಲ್ ಶುಕ್ರವಾರ ಹೇಳಿದ್ದಾರೆ.
ಢಾಕಾದಲ್ಲಿರುವ ಭಾರತೀಯ ಹೈಕಮಿಷನ್ ಮತ್ತು ಚಿತ್ತಗಾಂಗ್, ರಾಜ್‌ಶಾಹಿ, ಸಿಲ್ಹೆಟ್ ಮತ್ತು ಖುಲ್ನಾದಲ್ಲಿನ ಸಹಾಯಕ ಹೈಕಮಿಷನ್‌ಗಳು ಭಾರತೀಯ ಪ್ರಜೆಗಳನ್ನು ವಾಪಸ್ ಕಳುಹಿಸಲು ಸಹಾಯ ಮಾಡುತ್ತಿವೆ ಎಂದು ಎಂಇಎ ಹೇಳಿದೆ.
ಸ್ಥಳೀಯ ಅಧಿಕಾರಿಗಳ ಸಮನ್ವಯದಲ್ಲಿ, ಭಾರತ- ಬಾಂಗ್ಲಾದೇಶ ಅಂತರರಾಷ್ಟ್ರೀಯ ಗಡಿಯುದ್ದಕ್ಕೂ ಸುರಕ್ಷಿತ ಪ್ರಯಾಣಕ್ಕೆ ಅನುಕೂಲವಾಗುವಂತೆ ಹೈಕಮಿಷನ್ ಮತ್ತು ಸಹಾಯಕ ಹೈಕಮಿಷನ್‌ಗಳು ಕ್ರಮ ಕೈಗೊಂಡಿವೆ ಎಂದು ಪ್ರಕಟಣೆಯಲ್ಲಿ ಹೇಳಿದೆ.
'ನಮ್ಮ ನಾಗರಿಕರಿಗೆ ಸುಗಮ ಮಾರ್ಗ ಕಲ್ಪಿಸಲು ಎಂಇಎ ನಾಗರಿಕ ವಿಮಾನಯಾನ, ವಲಸೆ, ಭೂ, ಬಂದರುಗಳು ಮತ್ತು ಬಿಎಸ್‌ಎಫ್ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುತ್ತಿದೆ' ಎಂದು ಅದು ಹೇಳಿದೆ.
ಬಾಂಗ್ಲಾದೇಶದ ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ ಉಳಿದಿರುವ 4,000 ಕ್ಕೂ ಹೆಚ್ಚು ವಿದ್ಯಾರ್ಥಿಗಳೊಂದಿಗೆ ಭಾರತೀಯ ಹೈಕಮಿಷನ್ ಮತ್ತು ಸಹಾಯಕ ಹೈಕಮಿಷನ್‌ಗಳು ನಿಯಮಿತವಾಗಿ ಸಂಪರ್ಕದಲ್ಲಿವೆ. ಅವರಿಗೆ ಅಗತ್ಯ ನೆರವು ನೀಡುತ್ತಿವೆ. ಜೊತೆಗೆ ಕೋರಿಕೆಯ ಮೇರೆಗೆ ನೇಪಾಳ ಮತ್ತು ಭೂತಾನ್‌ನ ವಿದ್ಯಾರ್ಥಿಗಳಿಗೆ ಭಾರತದ ಗಡಿ ದಾಟಲು ಸಹಾಯ ಮಾಡಲಾಗಿದೆ ಎಂದು ಸಚಿವಾಲಯ ಹೇಳಿದೆ.
ಢಾಕಾದಲ್ಲಿನ ಹೈ ಕಮಿಷನ್ ಬಾಂಗ್ಲಾದೇಶದ ನಾಗರಿಕ ವಿಮಾನಯಾನ ಅಧಿಕಾರಿಗಳು ಮತ್ತು ವಾಣಿಜ್ಯ ವಿಮಾನಯಾನ ಸಂಸ್ಥೆಗಳೊಂದಿಗೆ ಢಾಕಾ ಮತ್ತು ಚಿತ್ತಗಾಂಗ್‌ನಿಂದ ಭಾರತಕ್ಕೆ ನಿರಂತರ ವಿಮಾನ ಸೇವೆ ಒದಗಿಸಲು ಸಮನ್ವಯ ಸಾಧಿಸುತ್ತಿದೆ. ಇದರಿಂದ ನಮ್ಮ ಪ್ರಜೆಗಳು ದೇಶಕ್ಕೆ ಮರಳಲು ಬಳಸಬಹುದು ಎಂದೂ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.