ADVERTISEMENT

ಪಶ್ಚಿಮ ಬಂಗಾಳ: ಎಂಟು ಜನರ ಸಜೀವ ದಹನ

ಟಿಎಂಸಿ ಸ್ಥಳೀಯ ಮುಖಂಡನ ಹತ್ಯೆಯ ಬಳಿಕ ನಡೆದ ಘಟನೆ; ಮನೆಗಳು ಬೆಂಕಿಗಾಹುತಿ

ಪಿಟಿಐ
Published 22 ಮಾರ್ಚ್ 2022, 20:32 IST
Last Updated 22 ಮಾರ್ಚ್ 2022, 20:32 IST
ಪಶ್ಚಿಮ ಬಂಗಾಳದ ರಾಮ್‌ಪುರಹಾಟ್‌ ಸಮೀಪ ಬೆಂಕಿಯಿಂದ ಸುಟ್ಟು ಕರಕಲಾಗಿರುವ ಮನೆಗಳು –ಪಿಟಿಐ ಚಿತ್ರ
ಪಶ್ಚಿಮ ಬಂಗಾಳದ ರಾಮ್‌ಪುರಹಾಟ್‌ ಸಮೀಪ ಬೆಂಕಿಯಿಂದ ಸುಟ್ಟು ಕರಕಲಾಗಿರುವ ಮನೆಗಳು –ಪಿಟಿಐ ಚಿತ್ರ   

ರಾಮ್‌ಪುರಹಾಟ್/ಕೋಲ್ಕತ್ತ: ಪಶ್ಚಿಮ ಬಂಗಾಳದ ಬಿರ್‌ಭೂಮ್ ಜಿಲ್ಲೆಯ ರಾಮ್‌ಪುರಹಾಟ್‌ ಎಂಬಲ್ಲಿ ಮಂಗಳವಾರ ನಸುಕಿನಲ್ಲಿ ಮನೆಗಳಿಗೆ ಬೆಂಕಿಹತ್ತಿ ಇಬ್ಬರು ಮಕ್ಕಳು ಸೇರಿದಂತೆ ಎಂಟು ಜನರು ಜೀವಂತವಾಗಿ ಸುಟ್ಟುಹೋಗಿದ್ದಾರೆ. ಘಟನೆ ಸಂಬಂಧ 11 ಜನರನ್ನು ಬಂಧಿಸಲಾಗಿದೆ.

ಈ ಘಟನೆಗೆ ಕೆಲವೇ ಗಂಟೆಗಳ ಮುನ್ನ, ಸ್ಥಳೀಯ ಪಂಚಾಯಿತಿ ಮುಖಂಡನ ಹತ್ಯೆಯಾಗಿತ್ತು ಎಂದು ಡಿಜಿಪಿ ಮನೋಜ್ ಮಾಳವೀಯ ಅವರು ಹೇಳಿದ್ದಾರೆ. ಪಂಚಾಯಿತಿ ಮುಖಂಡ ಟಿಎಂಸಿ ಪಕ್ಷದವರು.ಟಿಎಂಸಿಯ ಎರಡು ಗುಂಪುಗಳ ನಡುವಣ ದ್ವೇಷವೇ ಘಟನೆಗೆ ಕಾರಣ ಎನ್ನಲಾಗುತ್ತಿದೆ. ಆದರೆ, ಇದನ್ನು ಪೊಲೀಸರು ದೃಢಪಡಿಸಿಲ್ಲ.

ಸಜೀವ ದಹನ ಪ್ರಕರಣವು ರಾಜಕೀಯ ವಾಕ್ಸಮರಕ್ಕೂ ಕಾರಣವಾಗಿದೆ. ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕು ಎಂದು ಬಿಜೆಪಿ ಆಗ್ರಹಿಸಿದೆ. ಇದು ಪಕ್ಷದ ವರ್ಚಸ್ಸಿಗೆ ಮಸಿ ಬಳಿಯುವ ಯತ್ನ ಎಂದು ಟಿಎಂಸಿ ಹೇಳಿದೆ.

ADVERTISEMENT

ಘಟನೆಯು ಅತ್ಯಂತ ಘೋರ ಎಂದು ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್‌ ಧನಕರ್‌ ಹೇಳಿದ್ದಾರೆ. ರಾಜ್ಯವು ಹಿಂಸಾಚಾರ ಮತ್ತು ಕಾನೂನುರಹಿತತೆ ಸಂಸ್ಕೃತಿಯ ಹಿಡಿತದಲ್ಲಿದೆ ಎಂದಿದ್ದಾರೆ.

ಅನಪೇಕ್ಷಿತ ಹೇಳಿಕೆಗಳನ್ನು ನೀಡಬೇಡಿ ಎಂದು ರಾಜ್ಯಪಾಲರನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೇಳಿಕೊಂಡಿದ್ದಾರೆ. ರಾಜ್ಯ ಸರ್ಕಾರವನ್ನು ಟೀಕಿಸಲು ಇತರ ರಾಜಕೀಯ ಪಕ್ಷಗಳಿಗೆ ಬೆಂಬಲ ನೀಡುವಂತಹ ರಾಜಕೀಯ ಧಾಟಿಯು ರಾಜ್ಯಪಾಲರ ಮಾತಿನಲ್ಲಿ ಇದೆ ಎಂದಿದ್ದಾರೆ.

ಬೆಂಕಿಗೆ ಆಹುತಿಯಾದ ಮನೆಗಳಿಂದ ಸುಟ್ಟು ಕರಕಲಾಗದ ಏಳು ಶವಗಳನ್ನು ಹೊರತೆಗೆಯಲಾಗಿದ್ದು, ಗಾಯಗೊಂಡ ಮತ್ತೊಬ್ಬ ವ್ಯಕ್ತಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಘಟನೆಯಲ್ಲಿ ಮತ್ತಿಬ್ಬರು ಗಾಯಗೊಂಡಿದ್ದಾರೆ.

‘ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಗ್ರಾಮದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಮನೆಗಳಿಗೆ ಹೇಗೆ ಬೆಂಕಿ ಬಿತ್ತು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಪಂಚಾಯಿತಿ ಮುಖಂಡನ ಹತ್ಯೆಗೂ, ಇದಕ್ಕೂ ಸಂಬಂಧವಿದೆಯೇ ಎಂಬ ಆಯಾಮದಲ್ಲಿ ತನಿಖೆ ನಡೆಯುತ್ತಿದೆ. ವೈಯಕ್ತಿಕ ದ್ವೇಷದಿಂದ ಕೊಲೆ ನಡೆದಿರಬಹುದು’ ಎಂದು ಅವರು ಹೇಳಿದ್ದಾರೆ.

ಸೋಮವಾರ ರಾತ್ರಿ 8.30ರ ವೇಳೆಗೆ ಬರ್ಶಾಲ್ ಗ್ರಾಮದ ಪಂಚಾಯಿತಿ ಉಪಾಧ್ಯಕ್ಷ ಭದು ಶೇಕ್ ಎಂಬುವರ ಕೊಲೆಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಈ ಹತ್ಯೆ ನಡೆದ ಸ್ವಲ್ಪ ಸಮಯದಲ್ಲೇ ರಾಮ್‌ಪುರಹಾಟ್‌ ಪಟ್ಟಣದ ಹೊರವಲಯದ ಬೋಗತಿಯು ಗ್ರಾಮದ ಎಂಟು ಮನೆಗಳಿಗೆ ಬೆಂಕಿ ಬಿದ್ದಿತ್ತು. ಕೊಲೆಗೆ ಪ್ರತೀಕಾರವಾಗಿ ಮನೆಗಳಿಗೆ ಬೆಂಕಿಹಚ್ಚಲಾಗಿದೆ ಎಂದು ಕೆಲವರು ಹೇಳಿದ್ದಾರೆ.

ರಾಮ್‌ಪುರಹಾಟ್‌ ಪೊಲೀಸ್ ಠಾಣೆಯ ಉಸ್ತುವಾರಿ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ. ಸಿಐಡಿ ಎಡಿಜಿ ಗ್ಯಾನವಂತ್ ಸಿಂಗ್ ಅವರ ನೇತೃತ್ವದ ತನಿಖಾ ತಂಡವನ್ನು ಸರ್ಕಾರ ರಚಿಸಿದೆ.ಘಟನೆಯ ಪರಿಶೀಲನೆ ನಡೆಸಲು ಮೂವರು ಶಾಸಕರ ಸಮಿತಿಯೊಂದನ್ನು ಟಿಎಂಸಿ ಸ್ಥಳಕ್ಕೆ ಕಳುಹಿಸಿದೆ.

ಈ ಘಟನೆಯು ರಾಜಕೀಯ ಪಕ್ಷಗಳ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ಘಟನೆಯ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.

ಅಪರಾಧಿಗಳಿಗೆ ಪ್ರೋತ್ಸಾಹ ನೀಡುತ್ತಿರುವ, ರಾಜ್ಯದ ಜನರ ರಕ್ಷಣೆಯಲ್ಲಿ ವಿಫಲವಾಗಿರುವ ಮಮತಾ ಬ್ಯಾನರ್ಜಿ ಅವರುಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ವಕ್ತಾರ ಗೌರವ್ ಭಾಟಿಯಾ ಒತ್ತಾಯಿಸಿದ್ದಾರೆ.

ಪ್ರತಿಪಕ್ಷಗಳ ಆರೋಪವನ್ನು ತಳ್ಳಿಹಾಕಿರುವ ಟಿಎಂಸಿ ಪ್ರಧಾನ ಕಾರ್ಯದರ್ಶಿ ಕುನಾಲ್ ಘೋಷ್, ‘ಮನೆಗಳಿಗೆ ಬೆಂಕಿ ಹತ್ತಿದ ಘಟನೆ ಆಕಸ್ಮಿಕ. ಆಡಳಿತವು ಪರಿಸ್ಥಿತಿಯನ್ನು ನಿಭಾಯಿಸು‌ತ್ತಿದೆ’ ಎಂದಿದ್ದಾರೆ.

ಬಿಜೆಪಿ ಸದಸ್ಯರಿಂದ ಸಭಾತ್ಯಾಗ
ಎಂಟು ಜನರ ಸಜೀವ ದಹನ ಘಟನೆಯ ಕುರಿತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸದನದಲ್ಲಿ ಹೇಳಿಕೆ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ಸದಸ್ಯರು ಮಂಗಳವಾರ ಸಭಾತ್ಯಾಗ ಮಾಡಿದರು.

ಬಿಜೆಪಿ ಶಾಸಕ ಶಂಕರ್ ಘೋಷ್ ಅವರು ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಲು ಮುಂದಾದರು. ಆದರೆ ಪಟ್ಟಿಯಲ್ಲಿ ಈ ವಿಷಯ ಇಲ್ಲ ಎಂಬ ಕಾರಣ ನೀಡಿ ಸ್ಪೀಕರ್ ಅವರು ಮಾತನಾಡಲು ಅವಕಾಶ ನೀಡಲಿಲ್ಲ. ಧಿಕ್ಕಾರ ಕೂಗುತ್ತಾ 40 ಶಾಸಕರು ಸದನದಿಂದ ಹೊರನಡೆದರು.

ಕಳೆದ ವರ್ಷ ರಾಜ್ಯ ವಿಧಾನಸಭಾ ಚುನಾವಣೆ ಘೋಷಣೆಯಾದ ನಂತರ ರಾಜಕೀಯ ಹತ್ಯೆಗಳು ನಡೆಯುತ್ತಿವೆ ಎಂದು ಘೋಷ್ ಅವರು ಸದನದ ಹೊರಗೆ ಹೇಳಿದರು. ಆಡಳಿತ ಪಕ್ಷದ ಸದಸ್ಯರ ಹತ್ಯೆಯಾದಾಗಲೂ ಮುಖ್ಯಮಂತ್ರಿ ಹಾಗೂ ಪೊಲೀಸ್ ಇಲಾಖೆ ಮೌನ ವಹಿಸಿದ್ದು ಏಕೆ ಎಂದು ಅವರು ಪ್ರಶ್ನಿಸಿದ್ದಾರೆ.

*
ರಾಜ್ಯದ ಕಾನೂನು ಸುವ್ಯವಸ್ಥೆ ಮೇಲೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಯಾವುದೇ ನಿಯಂತ್ರಣ ಇಲ್ಲ ಎಂಬುದನ್ನು ಈ ಘಟನೆ ಸಾಬೀತುಪಡಿಸಿದೆ.
-ಜೆ.ಪಿ. ನಡ್ಡಾ, ಬಿಜೆಪಿ ಅಧ್ಯಕ್ಷ

*
ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷದ ಗೂಂಡಾಗಳಿಂದ ರಾಜ್ಯದ ಹಲವು ಜನರು ನಿರ್ದಯವಾಗಿ ಹತ್ಯೆಗೀಡಾಗುತ್ತಿರುವುದು ಖಂಡನೀಯ
-ಮೊಹಮ್ಮದ್ ಸಲೀಂ, ಸಿಪಿಎಂ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.