ಪಾಲಿ (ರಾಜಸ್ಥಾನ): ಬಾಂದ್ರಾ-ಜೋಧ್‌ಪುರ ಸೂರ್ಯನಗರಿ ಎಕ್ಸ್‌ಪ್ರೆಸ್ ರೈಲಿನ ಎಂಟು ಬೋಗಿಗಳು ರಾಜಸ್ಥಾನದ ಪಾಲಿ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಹಳಿತಪ್ಪಿವೆ.
ಮುಂಜಾನೆ 3.27ರಲ್ಲಿ ಜೋಧ್‌ಪುರ ವಿಭಾಗದ ರಾಜ್‌ಕೀ ಆವಾಸ್ - ಬೋಮದ್ರಾ ನಡುವೆ ದುರ್ಘಟನೆ ನಡೆದಿದೆ.
ಅವಘಡದಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ. ಆದರೆ, 11 ಬೋಗಿಗಳಿಗೆ ಹಾನಿಯಾಗಿದೆ. ಪ್ರಯಾಣಿಕರು ತಮ್ಮ ಸ್ಥಳ ತಲುಪಲು ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ. ಪರಿಸ್ಥಿತಿಯನ್ನು ನಿಭಾಯಿಸಲು ತುರ್ತು ಪರಿಹಾರ ರೈಲನ್ನು ಜೋಧ್‌ಪುರದಿಂದ ಕಳುಹಿಸಲಾಗಿದೆ ಎಂದು ವಾಯುವ್ಯ ರೈಲ್ವೆಯ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.
ಹಿರಿಯ ಅಧಿಕಾರಿಗಳು ಸ್ಥಳಕ್ಕೆ ತಲುಪಿದ್ದಾರೆ. ವಾಯುವ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕರು ಮತ್ತು ಇತರ ಉನ್ನತ ಅಧಿಕಾರಿಗಳು ಜೈಪುರದ ಪ್ರಧಾನ ಕಚೇರಿಯಲ್ಲಿರುವ ನಿಯಂತ್ರಣ ಕೊಠಡಿಯಲ್ಲಿ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
‘ಮಾರ್ವಾರ್ ಜಂಕ್ಷನ್‌ನಿಂದ ಹೊರಟ 5 ನಿಮಿಷಗಳಲ್ಲಿ ರೈಲಿನೊಳಗೆ ಕಂಪನ ಶುರುವಾಯಿತು. 2-3 ನಿಮಿಷಗಳ ನಂತರ ರೈಲು ನಿಂತಿತು. ಕೆಳಗಿಳಿದು ನೋಡಿದರೆ 8 ಸ್ಲೀಪರ್ ಕೋಚ್‌ಗಳು ಹಳಿ ತಪ್ಪಿದ್ದವು. 15-20 ನಿಮಿಷಗಳಲ್ಲೇ ಆಂಬ್ಯುಲೆನ್ಸ್‌ಗಳು ಸ್ಥಳಕ್ಕೆ ಬಂದವು’ ಎಂದು ಪ್ರಯಾಣಿಕರೊಬ್ಬರು ಮಾಹಿತಿ ನೀಡಿದ್ದಾರೆ.
ಪ್ರಯಾಣಿಕರ ಮಾಹಿತಿಗಾಗಿ ರೈಲ್ವೆ ಇಲಾಖೆ ಸಹಾಯವಾಣಿ ಸಂಖ್ಯೆಯನ್ನೂ ನೀಡಿದೆ. 02912654979, 02912654993, 02912624125, 02912431646, 02932250324 ಈ ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ. ಇನ್ನಿತರೆ ಮಾಹಿತಿಗಾಗಿ 138 ಮತ್ತು 1072ಕ್ಕೆ ಸಂಪರ್ಕಿಸಲು ಕೋರಲಾಗಿದೆ.
ಇವುಗಳನ್ನೂ ಓದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.