ADVERTISEMENT

ಮಸೀದಿಗಳಲ್ಲಿದ್ದ 800 ವಿದೇಶಿ ಜಮಾತ್‌ ಕಾರ್ಯಕರ್ತರು

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2020, 20:00 IST
Last Updated 4 ಏಪ್ರಿಲ್ 2020, 20:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೆಹಲಿ ಮಸೀದಿಗಳಲ್ಲಿ 800ಕ್ಕೂ ಹೆಚ್ಚು ವಿದೇಶಿ ಜಮಾತ್‌ ಕಾರ್ಯಕರ್ತರು ಅಡಗಿದ್ದನ್ನು ಪತ್ತೆ ಮಾಡಲಾಗಿದೆ.

ಪೊಲೀಸರು ಮತ್ತು ಆರೋಗ್ಯ ಕಾರ್ಯಕರ್ತರು ನಿಜಾಮುದ್ದೀನ್‌ ಪ್ರದೇಶದ ತಬ್ಲೀಗ್‌ ಜಮಾತ್‌ ಕೇಂದ್ರ ಕಚೇರಿಯಿಂದ ಸುಮಾರು 2,300 ಮಂದಿಯನ್ನು ಪತ್ತೆ ಮಾಡಿ ತೆರವುಗೊಳಿಸಿದ ಬಳಿಕ, ಹೆಚ್ಚಿನ ತನಿಖೆಯನ್ನು ಕೈಗೊಂಡಾಗ ಈ ವಿಷಯ ಗೊತ್ತಾಗಿದೆ ಎಂದು ‘ಹಿಂದೂಸ್ತಾನ್‌ ಟೈಮ್ಸ್‌’ ವರದಿ ಮಾಡಿದೆ.

ಇವರಲ್ಲಿ ಹಲವರು ಕೊರೊನಾ ವೈರಸ್‌ ಸೋಂಕಿಗೆ ಒಳಗಾಗಿರಬಹುದು. ಜತೆಗೆ ಇವರ ಸಂಪರ್ಕಕ್ಕೆ ಬಂದವರಿಗೂ ತಗುಲಿಸಿರುವ ಸಾಧ್ಯತೆಗಳು ಹೆಚ್ಚು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ನಾಲ್ಕು ದಿನಗಳಲ್ಲಿ ಶೋಧ ಕಾರ್ಯ ನಡೆಸಿದ ಪೊಲೀಸ್‌ ಮತ್ತು ಆರೋಗ್ಯ ಕಾರ್ಯಕರ್ತರ ತಂಡ ಸುಮಾರು 800 ವಿದೇಶಿಯರನ್ನು ಪತ್ತೆ ಮಾಡಿದೆ.

ದೆಹಲಿಯ ಸುಮಾರು 16 ಮಸೀದಿಗಳಲ್ಲಿ ಇವರು ಆಶ್ರಯ ಪಡೆದಿದ್ದರು. ಒಂದೆರೆಡು ದಿನಗಳಲ್ಲಿ ಇವರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.

‘ಎಷ್ಟು ವಿದೇಶಿಯರು ಮಸೀದಿಗಳಲ್ಲಿದ್ದರು ಎನ್ನುವುದು ಖಚಿತವಾಗಿ ತಿಳಿದು ಬಂದಿಲ್ಲ. ಇನ್ನೂ ಅಂತಿಮ ವರದಿ ಬರಬೇಕಾಗಿದೆ’ ಎಂದು ಗೃಹ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನೂ ಸುಮಾರು 900 ವಿದೇಶಿಯರು ನಗರದ ಸುತ್ತಮುತ್ತಲಿನ ಮಸೀದಿಗಳಲ್ಲಿ ಆಶ್ರಯ ಪಡೆದಿರಬಹುದು. ನಿಖರವಾದ ಸಂಖ್ಯೆ ತಿಳಿಸಲು ಸಾಧ್ಯವಿಲ್ಲ. ಇವರನ್ನು ಪತ್ತೆ ಮಾಡುವ ಕಾರ್ಯ ತ್ವರಿತಗತಿಯಲ್ಲಿ ನಡೆದಿದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.