ಪಣಜಿ: ಅಕೌಂಟೆಂಟ್ ಹುದ್ದೆಗಳ ನೇಮಕಾತಿಗೆ ಗೋವಾ ಸರ್ಕಾರ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಗೆ 8 ಸಾವಿರ ಅಭ್ಯರ್ಥಿಗಳು ಹಾಜರಾಗಿ ಪರೀಕ್ಷೆ ಬರೆದಿದ್ದರು. ಆದರೆ ಯಾರೊಬ್ಬರು ಉತ್ತೀರ್ಣರಾಗದೇ ಆ 80 ಹುದ್ದೆಗಳು ಮತ್ತೆ ಹಾಗೇ ಖಾಲಿ ಉಳಿದಿವೆ!
ಇದು ಆಶ್ವರ್ಯವೆನಿಸಿದರೂ ಸತ್ಯವಾದ ಘಟನೆ. ಪರೀಕ್ಷೆ ಬರೆದ ಎಲ್ಲಾ ಅಭ್ಯರ್ಥಿಗಳು ಅನುತ್ತೀರ್ಣರಾಗಿದ್ದಾರೆ.
ಪರೀಕ್ಷೆಯ ಮಾಹಿತಿ
* 2017 ಅಕ್ಟೋರ್ ತಿಂಗಳಲ್ಲಿ ಗೋವಾ ಸರ್ಕಾರ 80 ಅಕೌಂಟೆಂಟ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿತ್ತು.
* 2018 ಜನವರಿ 7ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗಿತ್ತು.
* ಪರೀಕ್ಷೆಗೆ ಹಾಜರಾದ 8 ಸಾವಿರ ಅಭ್ಯರ್ಥಿಗಳು ವಾಣಿಜ್ಯ ಪದವೀಧರರು.
* ಪರೀಕ್ಷೆ ಬರೆದು 8 ತಿಂಗಳ ಬಳಿಕ ಫಲಿತಾಂಶ ಪ್ರಕಟಿಸಲಾಗಿದೆ.
100 ಅಂಕಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗಿತ್ತು. ಸಂದರ್ಶನ ಸುತ್ತಿಗೆ ಆಯ್ಕೆಯಾಗಲು ಪರೀಕ್ಷೆಯಲ್ಲಿ 50 ಅಂಕಗಳನ್ನು ಕಡ್ಡಾಯವಾಗಿ ಪಡೆಯಬೇಕು ಎಂದು ನಿಗದಿಪಡಿಸಲಾಗಿತ್ತು. ಆದರೆ ಯಾವೊಬ್ಬ ಅಭ್ಯರ್ಥಿಯೂ 50 ಅಂಕಗಳನ್ನು ಪಡೆದಿಲ್ಲ ಎಂದು ನೇಮಕಾತಿ ಅಧಿಕಾರಿಗಳು ತಿಳಿಸಿದ್ದಾರೆ.
ಐದು ಗಂಟೆಗಳ ಅವಧಿಯ ಈ ಪರೀಕ್ಷೆಯಲ್ಲಿ ಸಾಮಾನ್ಯ ಜ್ಞಾನ, ಅಕೌಂಟ್ಸ್, ಇಂಗ್ಲಿಷ್‌ಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಲಾಗಿತ್ತು. ಅಭ್ಯರ್ಥಿಗಳು ಇಂಗ್ಲಿಷ್ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸುವ ಪ್ರಯತ್ನ ಮಾಡಿದ್ದರು. ಆದರೆ ಸಾಮಾನ್ಯ ಜ್ಞಾನ ಮತ್ತು ಅಕೌಂಟ್ಸ್ ಸಂಬಂಧಿತ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿರಲಿಲ್ಲ, ಇದರಿಂದ ಯಾವೊಬ್ಬ ಅಭ್ಯರ್ಥಿಯು ಉತ್ತೀರ್ಣರಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಗೋವಾ ವಿಶ್ವವಿದ್ಯಾಲಯ ಮತ್ತು ಇಲ್ಲಿನ ಕಾಮರ್ಸ್ ಕಾಲೇಜುಗಳಿಗೆ ಇದು ದೊಡ್ಡ ಹಿನ್ನೆಡೆಯಾಗಿದ್ದು ಗೋವಾದಲ್ಲಿ ಶಿಕ್ಷಣ ವ್ಯವಸ್ಥೆ ಹದಗೆಟ್ಟಿದೆ ಎಂದು ಎಎಪಿ ಗೋವಾ ಘಟಕದ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಪಡಗಾಂವ್ಕರ್ ಇಲ್ಲಿನ ಸರ್ಕಾರವನ್ನು ಟೀಕಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.