ರಾಮನಾಥಪುರಂ (ತಮಿಳುನಾಡು): ಭಾರತೀಯ ರೈಲ್ವೆ ಇಲಾಖೆಯ ವತಿಯಿಂದ ರಾಮೇಶ್ವರಂನ ಪಂಬನ್‌ನಲ್ಲಿ ನಿರ್ಮಾಣವಾಗುತ್ತಿರುವ ಹೊಸ ಸೇತುವೆ ಕಾಮಗಾರಿ ಶೇ 81ರಷ್ಟು ಪೂರ್ಣಗೊಂಡಿದೆ.
ಕಾಮಗಾರಿ ಕುರಿತು ಟ್ವೀಟ್ ಮಾಡಿರುವ ರೈಲ್ವೆ ಇಲಾಖೆ, ‘ಶೇ 81ರಷ್ಟು ಕೆಲಸ ಪೂರ್ಣಗೊಂಡಿದೆ. ಪೈಲಿಂಗ್ ಕಾಮಗಾರಿ (ಸಿಮೆಂಟ್ ಕಂಬಗಳ ಅಳವಡಿಕೆ) 333 ಪೈಲ್‌ಗಳು ಪೂರ್ಣಗೊಂಡಿವೆ. 101 ಪೈಲ್ ಕ್ಯಾಪ್ ರಚನೆ ಪೂರ್ಣಗೊಂಡಿದೆ. ಪಿಲ್ಲರ್‌ಗಳ ಮೇಲೆ ಗರ್ಡರ್ ಅಳವಡಿಕೆ ಕಾರ್ಯ ನಡೆಯುತ್ತಿದ್ದು, 99ರಲ್ಲಿ ಈವರೆಗೆ 76 ಅನ್ನು ಪೂರ್ಣಗೊಳಿಸಲಾಗಿದೆ’ ಎಂದು ಮಾಹಿತಿ ನೀಡಿದೆ.
2020ರ ಜುಲೈ1 ರಂದು ಸೇತುವೆ ನಿರ್ಮಾಣಕ್ಕೆ ಅಡಿಪಾಯ ಹಾಕಲಾಗಿತ್ತು. ₹250 ಕೋಟಿ ವೆಚ್ಚ ತಗಲುವ ಈ ಯೋಜನೆಯಿಂದ ಹಲವು ಉಪಯೋಗಗಳಿವೆ ಎಂದು ಇಲಾಖೆ ತಿಳಿಸಿದೆ.
ಈಗಿರುವ 105 ವರ್ಷಗಳ ಹಳೆಯ ಸೇತುವೆ ಪಕ್ಕದಲ್ಲಿಯೇ ನಿರ್ಮಾಣವಾಗುತ್ತಿರುವ ಈ ಸೇತುವೆಯಲ್ಲಿ ವರ್ಟಿಕಲ್ ಲಿಫ್ಟ್ ಅಳವಡಿಸಲಾಗಿದೆ. ಈಗಿರುವ ಹಳೆಯ ರೈಲು ಮಾರ್ಗದಲ್ಲಿ ಸರಕು ಸಾಗಾಣಿಕೆ ಕಷ್ಟ. ಆದರೆ, ಹೊಸ ಸೇತುವೆಯಲ್ಲಿ ಹಡಗುಗಳು ಮೂಲಕ ಹೆಚ್ಚಿನ ಸರಕು ಸಾಗಾಣಿಕೆ ಮಾಡಲು ಸುಲಭವಾಗಿ ಅವಕಾಶವಾಗುತ್ತದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.