ಚೆನ್ನೈ:ಆ ಅಜ್ಜಿಗೀಗ ಭರ್ತಿ 82ರ ವಯಸ್ಸು. ಆದರೂ ಬೆಳ್ಳಂಬೆಳಿಗ್ಗೆ ಎದ್ದು ಇಡ್ಲಿ ತಯಾರಿಸಲು ಟೊಂಕ ಕಟ್ಟಿದರೆಂದರೆ ಯುವತಿಯರನ್ನೂ ನಾಚಿಸುವಂತಹ ಉತ್ಸಾಹ. ಆ ಕ್ಷಣ ಆಕೆಯ ಪುಟ್ಟ ಗೂಡಂಗಡಿಯಲ್ಲಿ ಜೀವಕಳೆ ಇಮ್ಮಡಿಗೊಳ್ಳುತ್ತೆ. ಹಸಿದು ಬಂದವರಿಗೆ ₹ 1ರ ದರದಲ್ಲಿ ಇಡ್ಲಿ ವಿತರಿಸಲು ಶುರುಹಚ್ಚಿಕೊಂಡರೆ ಮಧ್ಯಾಹ್ನದವರೆಗೂ ದಣಿವರಿಯದ ಕೆಲಸ. ನಂತರ ವಿಶ್ರಾಂತಿ.
ಇದು ತಮಿಳುನಾಡಿನ ಕೊಯಮತ್ತೂರಿನ ವಡಿವೇಲಂಪಾಳಯಂ ಗ್ರಾಮದ ಅಜ್ಜಿ ಎಂ.ಕಮಲಥಾಳ್ ಅವರ ಜೀವನ ಗಾಥೆ.
ದಿನಾ ಬೆಳಿಗ್ಗೆ 5.30ಕ್ಕೆ ಏಳುವ ಕಮಲಥಾಳ್ ಅಜ್ಜಿ, 400–500 ಇಡ್ಲಿಗೆ ಬೇಕಾಗುವ ಅಷ್ಟೂ ಹಿಟ್ಟನ್ನು ತಾವೇ ರುಬ್ಬುತ್ತಾರೆ. ಬಿಸಿಬಿಸಿ ಇಡ್ಲಿ ತಯಾರಾದ ಕೂಡಲೇ ಇವರ ಗೂಡಂಗಡಿ ಬಾಗಿಲು ತೆರೆಯುತ್ತದೆ. ಜತೆಗೆ ಚಟ್ನಿ ತಯಾರಿಸಿ ಹಸಿದು ಬಂದ ಗ್ರಾಹಕರಿಗೆ ನೀಡಲು ಆರಂಭಿಸಿದರೆ ಇವರಿಗೆ ಅದರಲ್ಲೇ ಏನೋ ಸಂತೃಪ್ತಿ.ಬಡವರ ಹಸಿವು ನೀಗಿಸುವುದರಲ್ಲೇ ಇವರ ಹೊಟ್ಟೆಯೂ ತುಂಬುತ್ತೆ.
ಸುಮಾರು 30 ವರ್ಷಗಳಿಂದ ಪುಟ್ಟ ಗೂಡಂಗಡಿಯಲ್ಲಿ ಇಡ್ಲಿ ಮಾರಾಟ ಮಾಡುತ್ತಿರುವ ಈ ಅಜ್ಜಿಯ ಕುರಿತುದಿ ನ್ಯೂಸ್ ಮಿನಿಟ್ಜಾಲತಾಣ ಸೆಪ್ಟೆಂಬರ್ 4ರಂದು ವಿಡಿಯೊ ವರದಿ ಪ್ರಕಟಿಸಿತ್ತು. ಆ ವರದಿಯನ್ನು ಉದ್ಯಮಿ ಆನಂದ್ ಮಹಿಂದ್ರಾ ಅವರು ಟ್ವೀಟ್ ಮಾಡಿದ್ದರು. ನಂತರ ಈ ಅಜ್ಜಿಯ ಯಶೋಗಾಥೆ ವೈರಲ್ ಆಗಿದೆ. ಹತ್ತಾರು ಮಂದಿ ಆಕೆಯ ಸೇವಾ ಕೈಂಕರ್ಯದಲ್ಲಿ ಕೈಜೋಡಿಸಲು ಮುಂದಾಗಿದ್ದಾರೆ.
ಅಜ್ಜಿಯ ಈ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವಆನಂದ್ ಮಹಿಂದ್ರಾ ಅವರು, ಕಮಲಥಾಳ್ ಅವರು ಕಟ್ಟಿಗೆಯಿಂದ ಅಡುಗೆ ಮಾಡುವುದನ್ನು ಗಮನಿಸಿದ್ದೇನೆ. ಅವರಿಗೆ ಎಲ್‌ಪಿಜಿ ಸಿಲಿಂಡರ್ ಮತ್ತು ಸ್ಟವ್ ನೀಡುವ ಮೂಲಕ ನೆರವಾಗಲು ಬಯಸಿದ್ದೇನೆ ಎಂದು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿ. ಕಂಪನಿಯವರು ಅಜ್ಜಿಯ ಗೂಡಂಗಡಿಗೆ ತೆರಳಿ ಗ್ರೈಂಡರ್ ಮತ್ತು ಗ್ಯಾಸ್ ಸ್ಟವ್ ನೀಡಿ ನೆರವಾಗಿದ್ದಾರೆ.
ಕೊಯಮತ್ತೂರಿನ ಭಾರತ್ ಗ್ಯಾಸ್ ಏಜೆನ್ಸಿಯವರು ಎಲ್‌ಪಿಜಿ ಸಂಪರ್ಕ ಕೊಡಿಸಿದ್ದಾರೆ.
‘ನನಗೀಗ ಭರ್ತಿ 82. ಎಲ್ಲಿವರೆಗೂ ಹೀಗೆಯೇ ಕೆಲಸ ಮಾಡುತ್ತಿರುತ್ತೇನೋ ಗೊತ್ತಿಲ್ಲ. ನನ್ನ ಕುಟುಂಬದಲ್ಲಿ ಯಾರೂ ಇಲ್ಲ. ನಾನೊಬ್ಬಳೇ. ಬೆಳಿಗ್ಗೆ 5.30ಕ್ಕೆ ಎದ್ದು ಮಧ್ಯಾಹ್ನ 12ರವರೆಗೂ ಕೆಲಸ ಮಾಡುತ್ತೇನೆ. ನನಗೆ ಲಾಭ ಬೇಕಿಲ್ಲ. ಸಿಗುವ ಅಲ್ಪ ಮೊತ್ತ ನನ್ನ ಬದುಕಿಗೆ ಸಾಕು. ಪ್ರತಿ ದಿನ 400–500 ಇಡ್ಲಿ ತಯಾರಿಸಿ ಮಾರಾಟ ಮಾಡುತ್ತೇನೆ’! ಹೀಗೆಂದುಎಎನ್‌ಐಸುದ್ದಿ ಸಂಸ್ಥೆ ಜತೆ ಅಭಿಪ್ರಾಯ ಹಂಚಿಕೊಂಡಿದ್ದಾರೆಕಮಲಥಾಳ್.
ಕಮಲಥಾಳ್ ಅವರ ನಿಸ್ವಾರ್ಥ ಸೇವೆಗೆ ಟ್ವಿಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.