ADVERTISEMENT

ರಷ್ಯಾ ಸೇನೆಯಿಂದ 85 ಭಾರತೀಯರ ಬಿಡುಗಡೆ: ವಿದೇಶಾಂಗ ಕಾರ್ಯದರ್ಶಿ

ಪಿಟಿಐ
Published 22 ಅಕ್ಟೋಬರ್ 2024, 3:00 IST
Last Updated 22 ಅಕ್ಟೋಬರ್ 2024, 3:00 IST
<div class="paragraphs"><p>ವಿದೇಶಾಂದ ಕಾರ್ಯದರ್ಶಿ ವಿಕ್ರಮ್‌ ಮಿಸ್ರಿ</p></div>

ವಿದೇಶಾಂದ ಕಾರ್ಯದರ್ಶಿ ವಿಕ್ರಮ್‌ ಮಿಸ್ರಿ

   

ಪಿಟಿಐ ಚಿತ್ರ

ನವದೆಹಲಿ: ರಷ್ಯಾ ಸೇನೆಯಿಂದ ಈವರೆಗೆ 85 ಭಾರತೀಯ ಪ್ರಜೆಗಳನ್ನು ಬಿಡುಗಡೆಗೊಳಿಸಲಾಗಿದೆ. ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇನ್ನುಳಿದ 20 ಭಾರತೀಯರನ್ನು ಶೀಘ್ರ ವಾಪಸು ಕರೆತರಲು ಎಲ್ಲ ಪ್ರಯತ್ನಗಳನ್ನು ನಡೆಸಲಾಗುತ್ತಿದೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್‌ ಮಿಸ್ರಿ ಹೇಳಿದ್ದಾರೆ.

ADVERTISEMENT

‘ಇಂದು (ಮಂಗಳವಾರ) ರಷ್ಯಾದ ಕಜಾನ್‌ ನಗರದಲ್ಲಿ ನಡೆಯಲಿರುವ ಬ್ರಿಕ್ಸ್‌ ಶೃಂಗಸಭೆಯಲ್ಲಿ ರಷ್ಯಾದ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ. ಈ ವೇಳೆ ಉಳಿದ ಭಾರತೀಯರ ಬಿಡುಗಡೆ ವಿಷಯ ಕುರಿತು ಚರ್ಚಿಸಲಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.

ಜುಲೈನಲ್ಲಿ ಮಾಸ್ಕೋಗೆ ಭೇಟಿ ನೀಡಿ ಪುಟಿನ್‌ ಅವರೊಂದಿಗೆ ಮಾತುಕತೆ ನಡೆಸಿದ್ದ ಪ್ರಧಾನಿ ಮೋದಿ ಅವರು ರಷ್ಯಾ ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಭಾರತೀಯ ಪ್ರಜೆಗಳನ್ನು ಶೀಘ್ರ ಬಿಡುಗಡೆಗೊಳಿಸುವ ವಿಷಯವನ್ನು ಬಲವಾಗಿ ಪ್ರಸ್ತಾಪಿಸಿದ್ದರು.

ಅಕ್ರಮವಾಗಿ ಅಥವಾ ರಷ್ಯಾ ಸೇನೆಯಲ್ಲಿ ಹೋರಾಡಲು ಒಪ್ಪಂದದ ಮೇರೆಗೆ ತೆರಳಿರುವ ಭಾರತೀಯರ ಕುರಿತಂತೆ ರಷ್ಯಾದ ವಿದೇಶಾಂಗ ಮತ್ತು ರಕ್ಷಣಾ ಸಚಿವಾಲಯದ ಸಂಬಂಧಿತ ಅಧಿಕಾರಿಗಳ ಜೊತೆ ಭಾರತವು ನಿಕಟ ಸಂಪರ್ಕದಲ್ಲಿದೆ ಎಂದು ಮೋದಿ ಬ್ರಿಕ್ಸ್ ಸಮ್ಮೇಳನಕ್ಕೆ ತೆರಳುವ ಸಂಬಂಧ ಮಾಧ್ಯಮ ಪ್ರಕಟಣೆಯಲ್ಲಿ ಮಿಸ್ರಿ ತಿಳಿಸಿದ್ದಾರೆ.

‘ಪ್ರಸ್ತುತ ಮಾಹಿತಿಯ ಪ್ರಕಾರ, ಈವರೆಗೆ ಸುಮಾರು 85 ಭಾರತೀಯರು ರಷ್ಯಾದಿಂದ ದೇಶಕ್ಕೆ ಮರಳಿದ್ದಾರೆ. 20 ಜನರು ಇನ್ನೂ ರಷ್ಯಾ ಸೈನ್ಯದಲ್ಲಿ ಉಳಿದಿದ್ದಾರೆ. ಅವರನ್ನು ಆದಷ್ಟು ಶೀಘ್ರ ವಾಪಸು ಕರೆದುಕೊಂಡು ಬರಲು ಎಲ್ಲ ಪ್ರಯತ್ನ ನಡೆಸಲಾಗುತ್ತಿದೆ’ ಎಂದು ಮಿಸ್ರಿ ಹೇಳಿದ್ದಾರೆ.

ರಷ್ಯಾದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಒಂಬತ್ತು ಭಾರತೀಯರು ಮೃತಪಟ್ಟಿದ್ದಾರೆ ಎಂದು ಅಧಿಕೃತ ಅಂಕಿಅಂಶಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.