ನವದೆಹಲಿ (ಪಿಟಿಐ): ದೇಶದ 86 ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ನಿಗದಿತ ಪ್ರಮಾಣಕ್ಕಿಂತಲೂ ಶೇ 25ರಷ್ಟು ಕಲ್ಲಿದ್ದಲು ದಾಸ್ತಾನು ಕೊರತೆ ತಲೆದೋರಿದ್ದು, ವಿದ್ಯುತ್ ಪೂರೈಕೆ ಮೇಲೆ ಗಂಭೀರ ಪರಿಣಾಮ ಬೀರಬಹುದು.
ಕೇಂದ್ರ ವಿದ್ಯುತ್ ಪ್ರಾಧಿಕಾರದ (ಸಿಇಎ) ಅಕ್ಟೋಬರ್ 18ರ ದೈನಂದಿನ ವರದಿ ಪ್ರಕಾರ ಕಲ್ಲಿದ್ದಲು ಕೊರತೆ ತಲೆದೋರಿರುವ ಸಂಗತಿ ಬಹಿರಂಗಗೊಂಡಿದೆ. ಪ್ರಾಧಿಕಾರವು ದೇಶದಲ್ಲಿ ಒಟ್ಟು 181 ಶಾಖೋತ್ಪನ್ನ ಸ್ಥಾವರಗಳನ್ನು ನಿರ್ವಹಣೆ ಮಾಡುತ್ತಿದೆ. ಇವುಗಳ ಒಟ್ಟು ವಿದ್ಯುತ್ ಉತ್ಪಾದನಾ ಸಾಮರ್ಥ್ಯ 206 ಗಿಗಾ ವಾಟ್ ಆಗಿದೆ.
ದಾಸ್ತಾನು ಅಭಾವ ಎದುರಿಸುತ್ತಿರುವ 86 ಸ್ಥಾವರಗಳ ಪೈಕಿ ಆಮದು ಕಲ್ಲಿದ್ದನ್ನು ಅವಲಂಬಿಸಿರುವ ಆರು ಸ್ಥಾವರಗಳೂ ಇವೆ.
ದೇಶದ ಕಲ್ಲಿದ್ದಲು ಗಣಿ ಪ್ರದೇಶಗಳಿಂದ 148 ಸ್ಥಾವರಗಳು ದೂರದಲ್ಲಿವೆ. ಇವುಗಳ ವಿದ್ಯುತ್ ಉತ್ಪಾದನಾ ಸಾಮರ್ಥ್ಯ 149 ಗಿಗಾ ವಾಟ್ ಆಗಿದೆ. ಇವುಗಳಲ್ಲಿ ನಿಗದಿತ ಪ್ರಮಾಣಕ್ಕಿಂತ ಶೇ 29ರಷ್ಟು ಕಲ್ಲಿದ್ದಲು ಕೊರತೆ ತಲೆದೋರಿದೆ ಎಂದು ವರದಿ ವಿವರಿಸಿದೆ.
ಈ ನಡುವೆಯೂ ದೇಶೀಯ ಕಲ್ಲಿದ್ದಲು ಗಣಿಗಳನ್ನು ಅವಲಂಬಿಸಿರುವ 18 ಸ್ಥಾವರಗಳಲ್ಲಿ ದಾಸ್ತಾನು ಉತ್ತಮವಾಗಿದೆ. ಇವುಗಳಲ್ಲಿ ನಿಗದಿತ ಪ್ರಮಾಣಕ್ಕೆ ಹೋಲಿಸಿದರೆ ಶೇ 81ರಷ್ಟು ಸಂಗ್ರಹ ಇರುವುದು ಸಮಾಧಾನ ತಂದಿದೆ. ಇವುಗಳ ಒಟ್ಟು ವಿದ್ಯುತ್ ಉತ್ಪಾದನಾ ಸಾಮರ್ಥ್ಯ 40 ಗಿಗಾ ವಾಟ್ ಆಗಿದೆ ಎಂದು ಹೇಳಿದೆ.
ಈ ಸ್ಥಾವರಗಳು ಗಣಿ ಪ್ರದೇಶಗಳ ಹತ್ತಿರದಲ್ಲಿಯೇ ಇವೆ. ಹಾಗಾಗಿ, ಈ ಸ್ಥಾವರಗಳಿಗೆ ಕಲ್ಲಿದ್ದಲು ಕೊರತೆ ಬಾಧಿಸುತ್ತಿಲ್ಲ ಎಂದು ಪರಿಣತರು ಹೇಳಿದ್ದಾರೆ.
ಆಮದು ಕಲ್ಲಿದ್ದಲು:
ದೇಶದಲ್ಲಿರುವ ಆಮದು ಕಲ್ಲಿದ್ದಲು ಅವಲಂಬಿಸಿರುವ 15 ಸ್ಥಾವರಗಳಲ್ಲಿ ನಿಗದಿಪಡಿಸಿರುವ ಪ್ರಮಾಣಕ್ಕಿಂತಲೂ ಶೇ 52ರಷ್ಟು ದಾಸ್ತಾನು ಇದೆ. ಇವುಗಳ ಒಟ್ಟು ವಿದ್ಯುತ್ ಉತ್ಪಾದನಾ ಸಾಮರ್ಥ್ಯ 17 ಗಿಗಾ ವಾಟ್ ಆಗಿದೆ.
206 ಗಿಗಾವಾಟ್ ಸಾಮರ್ಥ್ಯದ 181 ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಸಾಮಾನ್ಯವಾಗಿ ಇರಬೇಕಾದ ಕಲ್ಲಿದ್ದಲು ದಾಸ್ತಾನು 5.4 ಕೋಟಿ ಟನ್. ಆದರೆ ಅದರ ಶೇ 38ರಷ್ಟು ಅಂದರೆ, 2.04 ಕೋಟಿ ಟನ್ ಮಾತ್ರ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.