ADVERTISEMENT

89 ಸಾಧಕರಿಗೆ ಪದ್ಮ ಪುರಸ್ಕಾರ

ವಿಜ್ಞಾನಿ ಪ್ರೊ. ಯು.ಆರ್‌ ರಾವ್‌ಗೆ ಪದ್ಮವಿಭೂಷಣ ಗೌರವ

​ಪ್ರಜಾವಾಣಿ ವಾರ್ತೆ
Published 25 ಜನವರಿ 2017, 19:41 IST
Last Updated 25 ಜನವರಿ 2017, 19:41 IST
89 ಸಾಧಕರಿಗೆ ಪದ್ಮ ಪುರಸ್ಕಾರ
89 ಸಾಧಕರಿಗೆ ಪದ್ಮ ಪುರಸ್ಕಾರ   

ನವದೆಹಲಿ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಕರ್ನಾಟಕದ ಎಂಟು ಮಂದಿ ಸೇರಿದಂತೆ ವಿವಿಧ ರಾಜ್ಯಗಳ 89 ಸಾಧಕರು ದೇಶದ ಅತ್ಯುನ್ನತ ನಾಗರಿಕ ಗೌರವವಾದ ಪದ್ಮ ಪುರಸ್ಕಾರಕ್ಕೆ ಈ ವರ್ಷ (2017) ಭಾಜನರಾಗಿದ್ದಾರೆ.

‌ಕರ್ನಾಟಕದ ಖ್ಯಾತ ಖಗೋಳ ವಿಜ್ಞಾನಿ ಪ್ರೊ. ಉಡುಪಿ ರಾಮಚಂದ್ರ ರಾವ್‌ ಅವರು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಪದ್ಮವಿಭೂಷಣ ಗೌರವಕ್ಕೆ ಆಯ್ಕೆಯಾಗಿದ್ದಾರೆ. ಇದು ದೇಶದ ಎರಡನೇ ಅತ್ಯುನ್ನತ ನಾಗರಿಕ ಗೌರವವಾಗಿದೆ.

ಭಾಷಾ ತಜ್ಞ ಪ್ರೊ. ಜಿ. ವೆಂಕಟಸುಬ್ಬಯ್ಯ (ಸಾಹಿತ್ಯ ಮತ್ತು ಶಿಕ್ಷಣ), ನಟಿ ಭಾರತಿ ವಿಷ್ಣುವರ್ಧನ್‌ (ಕಲೆ–ಸಿನಿಮಾ), ಜನಪದ ಗಾಯಕಿ ಸುಕ್ರಿ ಬೊಮ್ಮುಗೌಡ (ಕಲೆ–ಸಂಗೀತ), ಸಂಸ್ಕೃತ ಭಾರತಿಯ ಚ.ಮೂ. ಕೃಷ್ಣ ಶಾಸ್ತ್ರಿ (ಸಾಹಿತ್ಯ ಮತ್ತು ಶಿಕ್ಷಣ), ತೂಗು ಸೇತುವೆ ತಜ್ಞ ಗಿರೀಶ್‌ ಭಾರದ್ವಾಜ್‌ (ಸಮಾಜ ಸೇವೆ), ಭಾರತ ಅಂಧರ ಕ್ರಿಕೆಟ್‌ ತಂಡದ ಮಾಜಿ ನಾಯಕ ಶೇಖರ್‌ ನಾಯ್ಕ (ಕ್ರೀಡೆ) ಮತ್ತು ಅಥ್ಲೀಟ್‌ ವಿಕಾಸ ಗೌಡ (ಕ್ರೀಡೆ–ಡಿಸ್ಕಸ್‌ ಥ್ರೋ) ಅವರು ಪದ್ಮಶ್ರೀ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.

ADVERTISEMENT

ಈ ವರ್ಷ ತಲಾ ಏಳು ಜನರನ್ನು ಪದ್ಮ ವಿಭೂಷಣ ಮತ್ತು ಪದ್ಮ ಭೂಷಣ  ಹಾಗೂ 75 ಮಂದಿಯನ್ನು ಪದ್ಮಶ್ರೀ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.
89 ಮಂದಿಯಲ್ಲಿ 17 ಪುರಸ್ಕೃತರು ಮಹಿಳೆಯರು. ಆರು ಮಂದಿಗೆ ಮರಣೋತ್ತರವಾಗಿ ಪದ್ಮ ಗೌರವ ನೀಡಲಾಗಿದೆ. ವಿದೇಶಿ, ಎನ್‌ಆರ್‌ಐ  ಮತ್ತು ವಿದೇಶದಲ್ಲಿ ನೆಲೆಸಿರುವ ಭಾರತ ಮೂಲದ ಐವರು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿ ಪದ್ಮ ಗೌರವಕ್ಕೆ ಭಾಜನರಾದವರ ಸಂಖ್ಯೆ ಕಡಿಮೆ. 2016ರಲ್ಲಿ ಒಟ್ಟು 112 ಸಾಧಕರು ಅತ್ಯುನ್ನತ ನಾಗರಿಕ ಗೌರವ ಪಡೆದಿದ್ದರು.

ಇತರ ಪ್ರಮುಖರು: ಎನ್‌ಸಿಪಿ ಅಧ್ಯಕ್ಷ ಶರದ್‌ ಪವಾರ್‌ ಮತ್ತು ಬಿಜೆಪಿಯ ಹಿರಿಯ ಮುಖಂಡ ಮುರಳಿ ಮನೋಹರ ಜೋಶಿ ಅವರು ಸಾರ್ವಜನಿಕ ಆಡಳಿತ ಕ್ಷೇತ್ರದಲ್ಲಿ ಪದ್ಮವಿಭೂಷಣ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.

 ಕಲೆ ಮತ್ತು ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಖ್ಯಾತ ಗಾಯಕ ಕೆ.ಜೆ. ಯೇಸುದಾಸ್‌ ಅವರು ಪದ್ಮವಿಭೂಷಣ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.

ಅಧ್ಯಾತ್ಮ ಗುರು ಸದ್ಗುರು ಜಗ್ಗಿ ವಾಸುದೇವ್‌ ಅವರು ಕೂಡ ಪದ್ಮವಿಭೂಷಣ ಗೌರವಕ್ಕೆ ಪಾತ್ರರಾಗಿದ್ದಾರೆ. ದಿವಂಗತ ರಾಜಕಾರಣಿಗಳಾದ ಸುಂದರ್‌ ಲಾಲ್‌ ಪಟ್ವಾ ಹಾಗೂ ಪಿ.ಎ. ಸಂಗ್ಮಾ ಅವರಿಗೆ ಮರಣೋತ್ತರವಾಗಿ ಪದ್ಮವಿಭೂಷಣ ನೀಡಲಾಗಿದೆ.

ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿ ಪುರಸ್ಕೃತ, ಮೋಹನ ವೀಣಾ ವಾದಕ ವಿಶ್ವ ಮೋಹನ್ ಭಟ್‌ ಅವರು ಪದ್ಮಭೂಷಣ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ಇತ್ತೀಚೆಗೆ ನಿಧನ ಹೊಂದಿದ ಖ್ಯಾತ ಪತ್ರಕರ್ತ ತಮಿಳುನಾಡಿನ ಚೋ. ರಾಮಸ್ವಾಮಿ ಅವರಿಗೆ ಮರಣೋತ್ತರ ಪದ್ಮಭೂಷಣ ಗೌರವ ನೀಡಲಾಗಿದೆ.

ಖ್ಯಾತ ಹಿನ್ನೆಲೆ ಗಾಯಕರಾದ ಕೈಲಾಶ್‌ ಖೇರ್‌, ಅನುರಾಧ ಪೌದ್ವಲ್‌, ಕೇರಳದ ಸಮರ ಕಲೆ ಕಳರಿಪಯಟ್ಟು ಸಾಧಕಿ ಮೀನಾಕ್ಷಿ ಅಮ್ಮ, ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್ ಕೊಹ್ಲಿ,  ರಿಯೊ ಒಲಿಂಪಿಕ್ಸ್‌ನಲ್ಲಿ ಸಾಧನೆ ಮಾಡಿದ್ದ  ಸಾಕ್ಷಿ ಮಲಿಕ್‌, ದೀಪಾ ಕರ್ಮಾಕರ್‌, ಪ್ಯಾರಾಲಿಂಪಿಕ್ಸ್‌ ಸಾಧಕರಾದ ದೀಪಾ ಮಲಿಕ್ ಮತ್ತು ಮರಿಯಪ್ಪನ್‌ ತಂಗವೇಲು ಅವರು ಪದ್ಮಶ್ರೀಗೆ ಭಾಜನರಾಗಿದ್ದಾರೆ.

ರಾಷ್ಟ್ರಪತಿ ಭವನದಲ್ಲಿ ಮಾರ್ಚ್‌/ಏಪ್ರಿಲ್‌ ತಿಂಗಳಲ್ಲಿ ನಡೆಯುವ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು ಪದ್ಮ
ಪುರಸ್ಕಾರ ಪ್ರದಾನ ಮಾಡಲಿದ್ದಾರೆ.

ಕರ್ನಾಟಕದ ಸಾಧಕರು

ಭಾರತಿ ವಿಷ್ಣುವರ್ಧನ್‌ ಕಲೆ–ಸಿನಿಮಾ
ಸುಕ್ರಿ ಬೊಮ್ಮಗೌಡ ಕಲೆ–ಸಂಗೀತ
ಪ್ರೊ. ಜಿ. ವೆಂಕಟಸುಬ್ಬಯ್ಯ ಸಾಹಿತ್ಯ ಮತ್ತು ಶಿಕ್ಷಣ
ಚ.ಮೂ. ಕೃಷ್ಣ ಶಾಸ್ತ್ರಿ ಸಾಹಿತ್ಯ ಮತ್ತು ಶಿಕ್ಷಣ
ಗಿರೀಶ್‌ ಭಾರದ್ವಾಜ್‌ ಸಮಾಜ ಸೇವೆ
ಶೇಖರ್‌ ನಾಯ್ಕ್‌ ಕ್ರೀಡೆ–ಕ್ರಿಕೆಟ್‌
ವಿಕಾಸ ಗೌಡ ಕ್ರೀಡೆ– ಡಿಸ್ಕಸ್‌ ತ್ರೋ

ಪದ್ಮ ವಿಭೂಷಣ

ಹೆಸರು                    ಕ್ಷೇತ್ರ                   ರಾಜ್ಯ

ಕೆ.ಜೆ. ಯೇಸುದಾಸ್‌ ಕಲೆ–ಸಂಗೀತ ಕೇರಳ
ಸದ್ಗುರು ಜಗ್ಗಿ ವಾಸುದೇವ್‌ ಇತರೆ–ಅಧ್ಯಾತ್ಮ ತಮಿಳುನಾಡು
ಶರದ್‌ ಪವಾರ್‌ ಸಾರ್ವಜನಿಕ ಆಡಳಿತ ಮಹಾರಾಷ್ಟ್ರ
ಮುರಳಿ ಮನೋಹರ ಜೋಶಿ ಸಾರ್ವಜನಿಕ ಆಡಳಿತ ಉತ್ತರ ಪ್ರದೇಶ
ಪ್ರೊ. ಉಡುಪಿ ರಾಮಚಂದ್ರ ರಾವ್‌ ವಿಜ್ಞಾನ ಮತ್ತು ತಂತ್ರಜ್ಞಾನ ಕರ್ನಾಟಕ
ಸುಂದರ್‌ ಲಾಲ್‌ ಪಟ್ವಾ (ಮರಣೋತ್ತರ) ಸಾರ್ವಜನಿಕ ಆಡಳಿತ ಮಧ್ಯಪ್ರದೇಶ
ಪಿ.ಎ. ಸಂಗ್ಮಾ (ಮರಣೋತ್ತರ) ಸಾರ್ವಜನಿಕ ಆಡಳಿತ  ಮೇಘಾಲಯ
  ಪದ್ಮಭೂಷಣ  
ಹೆಸರು ಕ್ಷೇತ್ರ ರಾಜ್ಯ
ವಿಶ್ವ ಮೋಹನ್‌ ಭಟ್‌ ಕಲೆ–ಸಂಗೀತ ರಾಜಸ್ತಾನ
ಪ್ರೊ. ದೇವಿ ಪ್ರಸಾದ್‌ ದ್ವಿವೇದಿ ಸಾಹಿತ್ಯ ಮತ್ತು ಶಿಕ್ಷಣ ಉತ್ತರ ಪ್ರದೇಶ
ಟೆಹೆಮ್ಪ್ಟೆನ್‌ ಉದ್ವಾಡಿಯಾ ವೈದ್ಯಕೀಯ ಮಹಾರಾಷ್ಟ್ರ
ರತ್ನ ಸುಂದರ್‌ ಮಹಾರಾಜ್‌ ಇತರೆ–ಅಧ್ಯಾತ್ಮ ಗುಜರಾತ್‌
ಸ್ವಾಮಿ ನಿರಂಜನ ನಂದ ಸರಸ್ವತಿ ಇತರೆ–ಯೋಗ ಬಿಹಾರ
ಎಚ್‌.ಆರ್‌.ಎಚ್‌. ಪ್ರಿನ್ಸೆಸ್‌ ಮಹಾ ಚಕ್ರಿ ಸಿರಿಂಧೋರ್ನ್‌ (ವಿದೇಶಿ ಪ್ರಜೆ) ಸಾಹಿತ್ಯ ಮತ್ತು ಶಿಕ್ಷಣ ಥಾಯ್ಲೆಂಡ್
ಚೋ ರಾಮಸ್ವಾಮಿ (ಮರಣೋತ್ತರ) ಪತ್ರಿಕೋದ್ಯಮ ತಮಿಳುನಾಡು

*****

ಇದು ಸಂಸ್ಕೃತ ಭಾರತಿಗೆ ಸಂದ ಗೌರವ. 35 ವರ್ಷಗಳ ಸಂಸ್ಕೃತ ಭಾರತಿಯ ತಪಸ್ಸಿಗೆ ದೊರೆತ ಮನ್ನಣೆ. ಸಂಸ್ಕೃತವನ್ನೂ ರಾಷ್ಟ್ರಸೇವೆಯ ಭಾಗವಾಗಿ ಪರಿಗಣಿಸಿರುವುದು ಸಂತಸ ತಂದಿದೆ.
ಚ.ಮೂ. ಕೃಷ್ಣ ಶಾಸ್ತ್ರಿ

ಪದ್ಮಶ್ರೀ ಪ್ರಶಸ್ತಿ ದೊರೆತಿರುವುದು ಸಂತೋಷ ತಂದಿದೆ. ನನಗೆ ದೊರೆತ ಪ್ರಶಸ್ತಿ ನಾಡಿನ ಎಲ್ಲಾ ಜನಪದ ಕಲಾವಿದರಿಗೆ ಸಂದ ಗೌರವ ಎಂದು ಭಾವಿಸಿದ್ದೇನೆ. ಇಂತಹ ದೊಡ್ಡ ಗೌರವ ದೊರೆಯಬಹುದೆಂಬ ನಿರೀಕ್ಷೆ ಇರಲಿಲ್ಲ. ಆದ್ದರಿಂದ ನನ್ನ ಖುಷಿ ಇಮ್ಮಡಿಯಾಗಿದೆ.

ಸುಕ್ರಿ ಬೊಮ್ಮುಗೌಡ, ಜನಪದ ಕಲಾವಿದೆ

ಈ ಗೌರವಕ್ಕೆ ನಾನು ಎಷ್ಟು ಅರ್ಹಳೋ  ಗೊತ್ತಿಲ್ಲ. ನಾನು ಯಾವುದಕ್ಕೂ ಅಪೇಕ್ಷೆ ಪಟ್ಟವಳಲ್ಲ. ಪ್ರಶಸ್ತಿ ಬರಲಿಲ್ಲ ಎಂದು ತುಂಬಾ ಜನ ಹೇಳುತ್ತಿದ್ದರು. ಈಗ ಅವರ ಮುಖದಲ್ಲಿ ಸಂತೋಷ ಉಂಟಾಗಿದೆ.
ಭಾರತಿ ವಿಷ್ಣುವರ್ಧನ್‌, ನಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.