ಭುವನೇಶ್ವರ: ಪುರಿ ಜಗನ್ನಾಥ ದೇವಸ್ಥಾನಕ್ಕೆ ಅನಧಿಕೃತವಾಗಿ ಪ್ರವೇಶಿಸಿದ ಆರೋಪದ ಮೇಲೆ 9 ಮಂದಿ ಬಾಂಗ್ಲಾ ಪ್ರಜೆಗಳನ್ನು ಒಡಿಶಾ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
12ನೇ ಶತಮಾನದ ಈ ದೇಗುಲಕ್ಕೆ ನಿಯಮಗಳನ್ನು ಉಲ್ಲಂಘಿಸಿ ಹಿಂದೂಗಳಲ್ಲದ ಹಲವು ಬಾಂಗ್ಲಾ ಪ್ರಜೆಗಳು ಪ್ರವೇಶಿಸಿರುವುದನ್ನು ಕಂಡು ಕೆಲವು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಸಿಂಗ್‌ದ್ವಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ದೂರಿನ ಮೇರೆಗೆ ಭಾನುವಾರ ಸಂಜೆ ಸ್ಥಳಕ್ಕಾಗಮಿಸಿದ ಪೊಲೀಸರು ವಿಚಾರಣೆಗಾಗಿ ಬಾಂಗ್ಲಾ ಪ್ರಜೆಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಪುರಿಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಶೀಲ್ ಮಿಶ್ರಾ ತಿಳಿಸಿದ್ದಾರೆ.
‘ಬಾಂಗ್ಲಾದೇಶದ ಕೆಲವು ಹಿಂದೂಯೇತರರು ದೇವಾಲಯಕ್ಕೆ ಪ್ರವೇಶಿಸಿದ್ದಾರೆ ಎಂದು ನಮಗೆ ದೂರು ಬಂದಿದೆ. ಸದ್ಯ 9 ಮಂದಿ ಬಾಂಗ್ಲಾ ಪ್ರಜೆಗಳನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದೇವೆ' ಎಂದು ಅವರು ತಿಳಿಸಿದ್ದಾರೆ.
'ದೇವಾಲಯದ ನಿಯಮಗಳ ಪ್ರಕಾರ, ದೇಗುಲವನ್ನು ಪ್ರವೇಶಿಸಲು ಹಿಂದೂಗಳಿಗೆ ಮಾತ್ರ ಅವಕಾಶವಿದೆ. ಅವರು ಹಿಂದೂಗಳು ಅಲ್ಲ ಎಂದು ಕಂಡುಬಂದರೆ, ಕಾನೂನಿನ ಪ್ರಕಾರ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು' ಎಂದು ಸುಶೀಲ್ ಮಿಶ್ರಾ ಹೇಳಿದ್ದಾರೆ.
' ನಾವು ಅವರ ಪಾಸ್‌ಪೋರ್ಟ್‌ಗಳನ್ನು ಪರಿಶೀಲಿಸುತ್ತಿದ್ದೇವೆ. ಅವರಲ್ಲಿ ಒಬ್ಬ ಹಿಂದೂ ಇರುವುದು ಪತ್ತೆಯಾಗಿದೆ. ವಶಕ್ಕೆ ಪಡೆದ 9 ಮಂದಿಯಲ್ಲಿ ನಾಲ್ವರು ದೇವಸ್ಥಾನಕ್ಕೆ ಪ್ರವೇಶಿಸಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ' ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.