ADVERTISEMENT

ರಾಜಸ್ಥಾನ: ಒಂದು ತಿಂಗಳಲ್ಲೇ 100 ಶಿಶುಗಳ ಸಾವು

ಅಶೋಕ್ ಗೆಹ್ಲೋಟ್‌ ನೇತೃತ್ವದ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತ

ಪಿಟಿಐ
Published 2 ಜನವರಿ 2020, 22:41 IST
Last Updated 2 ಜನವರಿ 2020, 22:41 IST
   

ಕೋಟ: ಕೋಟದ ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ ತಿಂಗಳ (2019ರ ಡಿಸೆಂಬರ್‌) 30ರಂದು ನಾಲ್ಕು ಶಿಶುಗಳು ಹಾಗೂ 31ರಂದು ಐದು ಶಿಶುಗಳು ಮೃತಪಟ್ಟಿವೆ. ಇದರಿಂದಾಗಿ ಒಂದೇ ತಿಂಗಳಿನಲ್ಲಿ ಮೃತಪಟ್ಟ ಶಿಶುಗಳ ಸಂಖ್ಯೆ 100 ಕ್ಕೆ ಏರಿಕೆಯಾಗಿದೆ.

‘ಜನನದ ವೇಳೆ ಕಡಿಮೆ ತೂಕ ಇದ್ದುದೇ ಶಿಶುಗಳ ಸಾವಿಗೆ ಕಾರಣ. ಈಗ ಅವಧಿಪೂರ್ವ ಜನಿಸಿದ ಹಾಗೂ ಅನಾರೋಗ್ಯಪೀಡಿತ ಶಿಶುಗಳ ಆರೈಕೆ ಮಾಡುವ ತೀವ್ರ ನಿಗಾ ಘಟಕದ ಉಸ್ತುವಾರಿ ಸಿಬ್ಬಂದಿಯನ್ನು ಬದಲಿಸಲಾಗಿದೆ’ ಎಂದು ಆಸ್ಪತ್ರೆಯ ಅಧೀಕ್ಷಕ ಡಾ.ಸುರೇಶ್ ದುಲಾರಾ ಹೇಳಿದ್ದಾರೆ.

ಮಕ್ಕಳ ಹಕ್ಕುಗಳ ರಕ್ಷಣೆಯ ರಾಷ್ಟ್ರೀಯ ಆಯೋಗದ (ಎನ್‌ಸಿಪಿಸಿಆರ್‌) ತಂಡ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ರಾಜಸ್ಥಾನ ಸರ್ಕಾರಕ್ಕೆ ಶೋಕಾಸ್ ನೋಟಿಸ್ ನೀಡಿದೆ.

ADVERTISEMENT

‘ಆಸ್ಪತ್ರೆ ಆವರಣದಲ್ಲಿ ಹಂದಿಗಳು ಓಡಾಡುತ್ತಿರುವುದು ಕಂಡುಬಂದಿತು’ ಎಂದು ಎನ್‌ಸಿಪಿಸಿಆರ್‌ ಮುಖ್ಯಸ್ಥ ಪ್ರಿಯಾಂಕ್ ಕನುಂಗೊ ಹೇಳಿದ್ದಾರೆ.

ಪ್ರಮಾಣ ಇಳಿಕೆ: ‘2014ರಲ್ಲಿ 1,198 ಶಿಶುಗಳು ಮೃತಪಟ್ಟಿದ್ದವು. ಇದಕ್ಕೆ ಹೋಲಿಸಿದರೆ ನಂತರದ ವರ್ಷಗಳಲ್ಲಿ ಗಣನೀಯವಾಗಿ ಇಳಿಕೆಯಾಗಿತ್ತು. 2018ರಲ್ಲಿ 1,005 ಶಿಶುಗಳು, 2019ರಲ್ಲಿ 963 ಶಿಶುಗಳು ಮೃತಪಟ್ಟಿವೆ’ ಎನ್ನುತ್ತಾರೆ ಆಸ್ಪತ್ರೆ ಅಧಿಕಾರಿಗಳು.

‘ಆಸ್ಪತ್ರೆಯಲ್ಲಿ ಆಮ್ಲಜನಕ ಸರಬರಾಜು ಘಟಕ ಸ್ಥಾಪಿಸಲು ಆದೇಶ ನೀಡಲಾಗಿದೆ. 15 ದಿನಗಳಲ್ಲಿ ಈ ಕಾರ್ಯ ಪೂರ್ಣವಾಗಲಿದೆ’ ಎನ್ನುತ್ತಾರೆ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ವಿಜಯ್ ಸರ್ದಾನ.

ಈಚೆಗೆ ಆಸ್ಪತ್ರೆಗೆ ಭೇಟಿ ನೀಡಿದ ಬಿಜೆಪಿ ಸಂಸದೀಯ ಸಮಿತಿ, ಅಗತ್ಯ ಮೂಲಸೌಕರ್ಯ ಕೊರತೆ ಇರುವುದರ ಕುರಿತು ಕಳವಳ ವ್ಯಕ್ತಪಡಿಸಿತ್ತು.

‘ಒಂದೇ ಹಾಸಿಗೆಯಲ್ಲಿ ಎರಡು ಮೂರು ಮಕ್ಕಳನ್ನು ಮಲಗಿಸಲಾಗಿತ್ತು. ದಾದಿಯರ ಸಂಖ್ಯೆ ಅಗತ್ಯ ಪ್ರಮಾಣದಲ್ಲಿ ಇಲ್ಲ’ ಎಂದು ಸಮಿತಿ ತಿಳಿಸಿತ್ತು.

ಪ್ರಿಯಾಂಕಾ ಗಾಂಧಿ ಮೌನ ಏಕೆ:ಮಾಯಾವತಿ
ಲಖನೌ (ಪಿಟಿಐ): ಶಿಶುಗಳು ಮೃತಪಟ್ಟ ವಿಷಯದಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮೌನ ವಹಿಸಿರುವುದು ಏಕೆ ಎಂದು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಗುರುವಾರ ಪ್ರಶ್ನಿಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್‌ಗಳನ್ನು ಮಾಡಿರುವ ಮಾಯಾವತಿ, ಶಿಶುಗಳ ಸಾವಿಗೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದ ಸರ್ಕಾರವನ್ನು ದೂಷಿಸಿದ್ದಾರೆ.

‘ಗೆಹ್ಲೋಟ್ ಹಾಗೂ ಅವರ ಸರ್ಕಾರ ಇನ್ನೂ ಈ ವಿಷಯದಲ್ಲಿ ನಿರಾಸಕ್ತಿ ಹಾಗೂ ಬೇಜವಾಬ್ದಾರಿಯಿಂದ ಇದೆ. ಇದು ತೀವ್ರ ಖಂಡನೀಯ. ಡಿಸೆಂಬರ್‌ನಲ್ಲಿ 100 ಶಿಶುಗಳು ಮೃತಪಟ್ಟಿರುವುದು ದುಃಖಕರ. ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಈ ಕುರಿತು ಮೌನ ವಹಿಸಿರುವುದು ಮತ್ತಷ್ಟು ದುಃಖಕರ’ ಎಂದು ಅವರು ಹೇಳಿದ್ದಾರೆ.

‘ಉತ್ತರ ಪ್ರದೇಶದಲ್ಲಿ ಉನ್ನಾವ್‌ ಅತ್ಯಾಚಾರ ಸಂತ್ರಸ್ತರ ಕುಟುಂಬವನ್ನು ಭೇಟಿ ಮಾಡಿದಂತೆಯೇ, ಕೋಟದಲ್ಲಿಯೂ ಮಕ್ಕಳನ್ನು ಕಳೆದುಕೊಂಡ ತಾಯಂದಿರನ್ನು ಪ್ರಿಯಾಂಕಾ ಭೇಟಿ ಮಾಡಬೇಕಿತ್ತು. ಇಲ್ಲವಾದಲ್ಲಿ ಉತ್ತರ ಪ್ರದೇಶದ ಭೇಟಿಯನ್ನು ನಾಟಕೀಯ ಹಾಗೂ ರಾಜಕೀಯ ಹಿತಾಸಕ್ತಿಯ ನಡೆ ಎಂದು ಪರಿಗಣಿಸಲಾಗುತ್ತದೆ. ಈ ಕುರಿತು ಉತ್ತರ ಪ್ರದೇಶದ ಜನತೆ ಎಚ್ಚರಿಕೆಯಿಂದ ಇರಬೇಕು’ ಎಂದು ಹೇಳಿದ್ದಾರೆ.‌

ಯೋಗಿ ಆದಿತ್ಯನಾಥ ಖಂಡನೆ: ‘ಮಹಿಳೆಯಾಗಿದ್ದರೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಕೋಟದಲ್ಲಿ ಮಕ್ಕಳನ್ನು ಕಳೆದುಕೊಂಡ ತಾಯಂದಿರ ನೋವು ಅರಿಯದೆ ಇರುವುದು ತೀವ್ರ ದುಃಖಕರ’ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ವಾಗ್ದಾಳಿ ನಡೆಸಿದ್ದಾರೆ.

‘ರಾಜಕೀಯಗೊಳಿಸಬೇಡಿ’
ಜೈಪುರ:
‘ನವಜಾತ ಶಿಶುಗಳ ಸಾವನ್ನು ರಾಜಕೀಯಗೊಳಿಸಬಾರದು. ಈ ಕುರಿತು ನಮ್ಮ ಸರ್ಕಾರ ಸೂಕ್ಷ್ಮತೆಯಿಂದ ವರ್ತಿಸುತ್ತಿದೆ’ ಎಂದು ಗೆಹ್ಲೋಟ್ ಗುರುವಾರ ಹೇಳಿದ್ದಾರೆ.

ಬಿಜೆಪಿ ಹಾಗೂ ಬಿಎಸ್‌ಪಿ ಈ ಕುರಿತು ಟೀಕೆ ಮಾಡಿದ ಬೆನ್ನಲ್ಲೇ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.

‘ರಾಜಸ್ಥಾನದಲ್ಲಿ ಮಕ್ಕಳಿಗೆಂದೇ ಮೊದಲ ತೀವ್ರ ನಿಗಾ ಘಟಕ (ಐಸಿಯು) ಸ್ಥಾಪಿಸಿದ್ದು 2003ರಲ್ಲಿ ಕಾಂಗ್ರೆಸ್ ಸರ್ಕಾರ. 2011ರಲ್ಲಿ ಕೋಟದ ಆಸ್ಪತ್ರೆಯಲ್ಲಿ ಸಹಐಸಿಯು ಸ್ಥಾಪಿಸಲಾಯಿತು’ ಎಂದಿದ್ದಾರೆ.

ಖಂಡನೆ: ರಾಜ್ಯ ಸರ್ಕಾರದ ಧೋರಣೆ ಕುರಿತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸತೀಶ್ ಪೂನಿಯಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೇಂದ್ರದ ಉನ್ನತ ಸಮಿತಿ ರವಾನೆ
ನವದೆಹಲಿ (ಪಿಟಿಐ)
: ಜೋಧಪುರದ ಏಮ್ಸ್ ವೈದ್ಯರನ್ನು ಒಳಗೊಂಡ ಉನ್ನತ ಮಟ್ಟದ ಸಮಿತಿಯನ್ನು ಶುಕ್ರವಾರ ಕೋಟದ ಆಸ್ಪತ್ರೆಗೆ ಕೇಂದ್ರ ಸರ್ಕಾರ ಕಳುಹಿಸಲಿದೆ.

ರಾಷ್ಟ್ರೀಯ ಆರೋಗ್ಯ ಯೋಜನೆ ಹಾಗೂ ರಾಜ್ಯದ ವೈದ್ಯಕೀಯ ಶಿಕ್ಷಣ ಇಲಾಖೆ ಮೂಲಕ ಆಸ್ಪತ್ರೆಗೆ ಅಗತ್ಯವಿರುವ ತಾಂತ್ರಿಕ ಹಾಗೂ ಆರ್ಥಿಕ ನೆರವು ಒದಗಿಸಲು ತಂಡ ಜಂಟಿ ಕ್ರಿಯಾ ಯೋಜನೆ ರೂಪಿಸಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಹೇಳಿಕೆ ತಿಳಿಸಿದೆ.

ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು ಟ್ವೀಟ್ ಮಾಡಿದ್ದು, ‘ಗೆಹ್ಲೋಟ್ ಅವರಿಗೆ ಪತ್ರ ಬರೆದಿದ್ದೇನೆ. ಆಸ್ಪತ್ರೆಯಲ್ಲಿ ಸಾವುಗಳು ಸಂಭವಿಸುವುದನ್ನು ತಡೆಯಲು ಎಲ್ಲಾ ರೀತಿಯ ನೆರವು ನೀಡಲಾಗುವುದು ಎಂದು ಅವರಿಗೆ ತಿಳಿಸಿದ್ದೇನೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.