ADVERTISEMENT

ಬಿಹಾರ: ಕಿರುಕುಳ ವಿರೋಧಿಸಿದ ವಿದ್ಯಾರ್ಥಿನಿಯರ ಮೇಲೆ ಹಲ್ಲೆ, 9 ಮಂದಿ ಬಂಧನ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2018, 9:07 IST
Last Updated 8 ಅಕ್ಟೋಬರ್ 2018, 9:07 IST
   

ಪಟ್ನಾ:ಕಿರುಕುಳ ನೀಡುವುದನ್ನು ವಿರೋಧಿಸಿದ 34 ಬಾಲಕಿಯರ ಮೇಲೆ ಗೂಂಡಾಗಳ ಗುಂಪೊಂದು ಹಲ್ಲೆ ನಡೆಸಿದ ಅಮಾನವೀಯ ಘಟನೆ ಸಂಬಂಧ ಒಂಬತ್ತು ಜನರನ್ನು ಸೋಮವಾರ ಬಂಧಿಸಲಾಗಿದೆ.

ಘಟನೆ ಸಂಬಂಧ ಈವರೆಗೆ ಒಂಬತ್ತು ಮಂದಿಯನ್ನು ಬಂಧಿಸಲಾಗಿದೆ. ಅದರಲ್ಲಿ ಒಬ್ಬ ಅಪ್ರಾಪ್ತ. ಉಳಿದವರ ವಯಸ್ಸನ್ನು ಖಾತ್ರಿಪಡಿಸಿಕೊಳ್ಳಲು ಜನ್ಮ ದಿನಾಂಕ ದೃಢೀಕರಣ ಪತ್ರವನ್ನು ಕೇಳಲಾಗಿದೆ. ಇತರರ ಪತ್ತೆಗಾಗಿ ಕ್ರಮ ಕೈಗೊಂಡಿದ್ದೇವೆ ಎಂದು ತ್ರಿವೇಣಿಗಂಜ್‌ನ ಎಎಸ್‌ಪಿ ತಿಳಿಸಿದ್ದಾರೆ.

ಸುಪೌಲ್ ಜಿಲ್ಲೆಯ ತ್ರಿವೇಣಿಗಂಜ್‌ನಲ್ಲಿನ ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯದಲ್ಲಿ ಹಲ್ಲೆ ಘಟನೆ ನಡೆದಿದ್ದು, ಗಾಯಗೊಂಡಿರುವ ಬಾಲಕಿಯರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ADVERTISEMENT

ಘಟನೆ ಸಂಬಂಧ ಎಫ್‌ಐಆರ್‌ ದಾಖಲಿಸಿಕೊಂಡಿದ್ದ ಪೊಲೀಸರು ಕೃತ್ಯ ಎಸಗಿದವರಿಗಾಗಿ ಹುಡುಕಾಟ ನಡೆಸಿದ್ದರು.

‘ಹುಡುಗಿಯರು ನನ್ನ ಹೆಸರು ಹೇಳಿರಬಹುದು. ಆದರೆ, ನಾನೇನೂ ಮಾಡಿಲ್ಲ. ನೀನೇನಾದರು ಮಾಡಿದ್ದೀಯಾ ಎಂದು ಅವರು ನನ್ನನ್ನು ಕೇಳಿದರು. ಇಲ್ಲ ಎಂದು ಹೇಳುವಷ್ಟರಲ್ಲಿ ಅವರು ನನ್ನನ್ನು ಹೊಡೆದರು’ ಎಂದು ಬಂಧಿತ ಆರೋಪಿ ಮೋಹನ್‌ ಹೇಳಿಕೊಂಡಿದ್ದಾನೆ ಎಂದು ಎಎನ್‌ಐ ಟ್ವಿಟ್‌ ಮಾಡಿದೆ.

ಘಟನೆ ವಿವರ: ಕೆಲವು ಸ್ಥಳೀಯ ಯುವಕರು ಶಾಲೆ ಒಳಗೆ ನುಸುಳಲು ಯತ್ನಿಸಿದ್ದಾರೆ. ಅಲ್ಲದೇ, ಬಾಲಕಿಯರ ಕುರಿತಂತೆ ಶಾಲೆಯ ಗೋಡೆಯ ಮೇಲೆ ಅಶ್ಲೀಲವಾಗಿ ಬರೆದಿದ್ದಾರೆ. ಈ ಕೃತ್ಯವನ್ನು ಪ್ರತಿಭಟಿಸಿದ ಬಾಲಕಿಯರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ.

ನಂತರ, ಬಾಲಕಿಯರು ಯುವಕರನ್ನು ಹಿಡಿದು, ಹೊಡೆದಾಗ, ಅವರು ಶಾಲೆಯಿಂದ ಕಾಲ್ಕಿತ್ತಿದ್ದಾರೆ. ಸುಮಾರು ಎರಡು ಗಂಟೆ ನಂತರ ತಮ್ಮ ಸ್ನೇಹಿತರು, ಸಂಬಂಧಿಗಳೊಂದಿಗೆ, ಬಡಿಗೆಗಳ ಸಮೇತ ಶಾಲೆಗೆ ನುಗ್ಗಿದ ಯುವಕರ ಗುಂಪು ಬಾಲಕಿಯರನ್ನು ಮನಬಂದಂತೆ ಥಳಿಸಿದೆ. ಇದಕ್ಕೆ ಪ್ರತಿರೋಧ ಒಡ್ಡಿದ ಶಿಕ್ಷಕರ ಮೇಲೂ ಗುಂಪು ಹಲ್ಲೆ ಮಾಡಿದೆ.

‘ಇದು ಅತ್ಯಂತ ಖೇದದ ವಿಷಯ. ಬಾಲಕಿಯರ ಮೇಲೆ ಹಲ್ಲೆ ನಡೆಸಿದ ಯಾರೊಬ್ಬರನ್ನೂ ತಪ್ಪಿಸಿಕೊಳ್ಳಲು ಬಿಡುವುದಿಲ್ಲ’ ಎಂದು ಜಿಲ್ಲಾಧಿಕಾರಿ ಬೈದ್ಯನಾಥ್ ಯಾದವ್ ಪ್ರತಿಕ್ರಿಯಿಸಿದ್ದರು.

* ಇದನ್ನೂ ಓದಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.