ಮುಂಬೈ: ಗೋರಖಪುರಕ್ಕೆ ತೆರಳುವ ರೈಲು ಏರಲು ಮುಂದಾದವರಿಂದ ಬಾಂದ್ರಾ ನಿಲ್ದಾಣದಲ್ಲಿ ನೂಕುನುಗ್ಗಲು ಉಂಟಾಗಿದ್ದರಿಂದ ಸಂಭವಿಸಿದ ಕಾಲ್ತುಳಿತಕ್ಕೆ ಸಿಲುಕಿ 10 ಮಂದಿಗೆ ಗಾಯಗಳಾಗಿವೆ ಎಂದು ಮುಂಬೈ ವಿಪತ್ತು ನಿಯಂತ್ರಣ ಘಟಕದ ಅಧಿಕಾರಿಗಳು ತಿಳಿಸಿದ್ದಾರೆ. ಹತ್ತು ಮಂದಿಯ ಪೈಕಿ ಇಬ್ಬರಿಗೆ ಗಂಭೀರ ಗಾಯಗಳಾಗಿವೆ.
ದೀಪಾವಳಿ ಮತ್ತು ಛತ್ ಹಬ್ಬಗಳ ಕಾರಣಕ್ಕೆ ಊರಿಗೆ ತೆರಳಲು ಜನರು ಬಾಂದ್ರಾ ರೈಲು ನಿಲ್ದಾಣದಲ್ಲಿ ಭಾರಿ ಸಂಖ್ಯೆಯಲ್ಲಿ ಸೇರಿದ್ದರು. ರೈಲು ಪ್ಲಾಟ್ಫಾರ್ಮ್ಗೆ ಬರುತ್ತಿದ್ದಾಗ, ಕಾಯ್ದಿರಿಸದ ಆಸನಗಳ ಬೋಗಿಗಳತ್ತ ಜನರು ಒಮ್ಮೆಗೇ ನುಗ್ಗಿದರು ಎಂದು ಮೂಲಗಳು ಹೇಳಿವೆ. ನಸುಕಿನ 2.45ರ ಸುಮಾರಿಗೆ, ರೈಲು ನಿಧಾನವಾಗಿ ಸಾಗುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಇಬ್ಬರು ಪ್ರಯಾಣಿಕರಿಗೆ ಮಾತ್ರ ಗಾಯಗಳಾಗಿವೆ ಎಂದು ಪಶ್ಚಿಮ ರೈಲ್ವೆ ಹೇಳಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕಾಲ್ತುಳಿತಕ್ಕೆ ಸಂಬಂಧಿಸಿದ್ದು ಎನ್ನಲಾದ ಕೆಲವು ವಿಡಿಯೊಗಳು ಸಾಮಾಜಿಕ ಜಾಲತಾಣಗಳ ಮೂಲಕ ಹರಿದಾಡಿವೆ. ಒಂದು ವಿಡಿಯೊದಲ್ಲಿ, ಕಾಲಿಗೆ ಗಾಯಗಳಾದ ವ್ಯಕ್ತಿಯೊಬ್ಬರು ಪ್ಲಾಟ್ಫಾರ್ಮ್ ಮೇಲೆ ಬಿದ್ದಿದ್ದಾರೆ. ಇತರರು ಈ ವ್ಯಕ್ತಿಯನ್ನು ಗಮನಿಸದೆ ರೈಲು ಹತ್ತುತ್ತಿರುವುದು ದಾಖಲಾಗಿದೆ. ಕಾಲ್ತುಳಿತ ಸಂಭವಿಸಿದಾಗ ಪ್ಲಾಟ್ಫಾರ್ಮ್ ಸಂಖ್ಯೆ ಒಂದರತ್ತ ರೈಲು ಬರುತ್ತಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.