ನವದೆಹಲಿ: 2050ರ ಹೊತ್ತಿಗೆ ದೇಶದಲ್ಲಿ ಸುಮಾರು 85–90 ಕೋಟಿಯಷ್ಟು ಜನ ನಗರ ಪ್ರದೇಶಗಳಲ್ಲಿ ವಾಸಿಸಲಿದ್ದಾರೆ ಎಂದು ಕೇಂದ್ರ ವಸತಿ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಮಂಗಳವಾರ ಹೇಳಿದರು. ವೇಗವಾಗಿ ಬೆಳೆಯುತ್ತಿರುವ ನಗರ ಪ್ರದೇಶಗಳಲ್ಲಿನ ಜನ ಸಂಖ್ಯೆಯ ಹಿನ್ನೆಲೆಯಲ್ಲಿ ಸಚಿವರು ಈ ಮಾತನ್ನು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಹರ್ದೀಪ್ ಅವರು ಮಾತನಾಡಿ, ‘ದೇಶದ ನಗರಗಳಲ್ಲಿ ಆಗಬೇಕಾದ ಅಭಿವೃದ್ಧಿಯು ಸವಾಲಿನಿಂದ ಕೂಡಿದೆ. ನಗರೀಕರಣವು ತೀವ್ರಗತಿಯಲ್ಲಿ ಬೆಳೆಯುತ್ತಿದ್ದು, ಪ್ರತಿ ನಿಮಿಷಕ್ಕೆ ಸರಾಸರಿ 20–30 ಜನರು ನಗರ ಪ್ರದೇಶದಲ್ಲಿ ವಾಸಿಸಲು ಬರುತ್ತಿದ್ದಾರೆ‘ ಎಂದರು.
ಅಲ್ಲದೇ, 2050ರ ಹೊತ್ತಿಗೆ ದೇಶದ ನಗರಗಳಲ್ಲಿ ವಾಸಿಸುವ ಜನಸಂಖ್ಯೆ 85–90 ಕೋಟಿ ತಲುಪಲಿದೆ ಎಂದು ಹರ್ದೀಪ್ ಅಭಿಪ್ರಾಯ ವ್ಯಕ್ತಪಡಿಸಿದರು.
ಕೇಂದ್ರ ವಸತಿ ಸಚಿವಾಲಯದ ಪ್ರಕಾರ, ಪಿಎಂಎವೈ–ಅರ್ಬನ್ (PMAY-Urban) ಯೋಜನೆಯಡಿ 1.2 ಕೋಟಿಗೂ ಹೆಚ್ಚು ಮನೆಗಳನ್ನು ಮಂಜೂರು ಮಾಡಲಾಗಿದೆ. ನಗರ ಪ್ರದೇಶಗಳಲ್ಲಿ 1.1 ಕೋಟಿಗೂ ಹೆಚ್ಚು ಅನಾಧಿಕೃತ ಮನೆಗಳನ್ನು ಈಗಾಗಲೇ ನೆಲಸಮಗೊಳಿಸಲಾಗಿದೆ. ಹಾಗೂ, 73.45 ಲಕ್ಷ ಮನೆಗಳನ್ನು ಫಲಾನುಭವಿಗಳಿಗೆ ಕಟ್ಟಿಕೊಡಲಾಗಿದೆ ಎಂದು ಸಚಿವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.