ನವದೆಹಲಿ:ಲಾಕ್‌ಡೌನ್ ಸಂದರ್ಭದಲ್ಲಿ ಬೇರೆಬೇರೆ ರಾಜ್ಯಗಳಲ್ಲಿ ಸಿಲುಕಿ ಕೊಂಡಿದ್ದ ವಲಸೆ ಕಾರ್ಮಿಕರಿಗಾಗಿ ಆರಂಭಿಸಿದ್ದ ಶ್ರಮಿಕ ವಿಶೇಷ ರೈಲಿನಲ್ಲಿ 97 ಪ್ರಯಾಣಿಕರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ರೈಲ್ವೆ ಸಚಿವಪೀಯೂಷ್ ಗೋಯಲ್ ಶುಕ್ರವಾರ ತಿಳಿಸಿದ್ದಾರೆ.
ತೃಣಮೂಲ ಕಾಂಗ್ರೆಸ್ ಸಂಸದ ಡೆರೆಕ್ ಒಬ್ರಿಯಾನ್ ಅವರು ಶುಕ್ರವಾರ ಕೇಳಿದ ಪ್ರಶ್ನೆಗೆ ಸಚಿವರುಲಿಖಿತರೂಪದಲ್ಲಿರಾಜ್ಯಸಭೆಗೆ ಉತ್ತರನೀಡಿದ್ದಾರೆ. ಶ್ರಮಿಕ ರೈಲಿನಲ್ಲಿ ಪ್ರಯಾಣದ ವೇಳೆ ವಲಸೆ ಕಾರ್ಮಿಕರು ಸಾವನ್ನಪ್ಪಿದ್ದು ಹೌದು ಎಂಬುದನ್ನು ಸರ್ಕಾರ ಇದೇ ಮೊದಲ ಬಾರಿಗೆ ಒಪ್ಪಿಕೊಂಡಿದೆ.
‘ಪ್ರಕರಣದ ಸಂಬಂಧ, ರಾಜ್ಯ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿದ್ದು, ಮುಂದಿನ ಕಾನೂನು ಕ್ರಮ ತೆಗೆದುಕೊಳ್ಳಲಿದ್ದಾರೆ’ಎಂದು ಅವರು ಹೇಳಿದ್ದಾರೆ.
‘97 ಸಾವು ಪ್ರಕರಣಗಳಲ್ಲಿ 87 ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿತ್ತು. ಈವರೆಗೆ 51 ಮರಣೋತ್ತರ ಪರೀಕ್ಷೆಯ ವರದಿಗಳನ್ನು ಆಯಾ ರಾಜ್ಯ ಪೊಲೀಸರಿಂದ ಪಡೆಯಲಾಗಿದೆ. ಅದರ ಅನುಸಾರ ಹೃದಯಾಘಾತ, ಮಿದುಳಿನಲ್ಲಿ ರಕ್ತಸ್ರಾವ, ದೀರ್ಘಕಾಲದ ಕಾಯಿಲೆ,ಶ್ವಾಸಕೋಶ, ಯಕೃತ್ತಿನ ಸಮಸ್ಯೆಯಿಂದಾಗಿ ಈ ಸಾವು ಸಂಭವಿಸಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.
ಮೇ 1ರಿಂದ ಆಗಸ್ಟ್ 31ರ ವರೆಗೆ 4,621 ಶ್ರಮಿಕ್ ರೈಲುಗಳು ಸಂಚಾರ ನಡೆಸಿದ್ದು, 6,319,000 ಪ್ರಯಾಣಿಕರನ್ನು ಅವರವರ ರಾಜ್ಯಕ್ಕೆ ಕರೆದೊಯ್ಯಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.