ಅಯೋಧ್ಯೆ : ರಾಮನ ಊರಿನಲ್ಲಿ ಒಂದು ವಿಶಿಷ್ಟವಾದ ಬ್ಯಾಂಕ್ ಇದೆ. ಈ ಬ್ಯಾಂಕ್ ಹಣಕ್ಕೆ ಸಂಬಂಧಿಸಿದ್ದಲ್ಲ. ಇಲ್ಲಿ ಖಾತೆ ಹೊಂದಿರುವವರಿಗೆ ಸಿಗುವುದು ಮನಃಶಾಂತಿ ಮತ್ತು ಆಧ್ಯಾತ್ಮಿಕ ತೃಪ್ತಿ!
ಹೊಸದಾಗಿ ನಿರ್ಮಿಸಿರುವ ರಾಮ ಮಂದಿರವನ್ನು ನೋಡಲು ಬರುತ್ತಿರುವ ಪ್ರವಾಸಿಗರು, ಭಕ್ತರ ಗಮನವನ್ನು ಸೆಳೆಯುತ್ತಿರುವ ಇದರ ಹೆಸರು ‘ಅಂತರರಾಷ್ಟ್ರೀಯ ಶ್ರೀ ಸೀತಾರಾಮ ಬ್ಯಾಂಕ್’. ‘ಸೀತಾರಾಮ’ ಎಂದು ಪ್ರತಿ ಪುಟದಲ್ಲಿಯೂ ಬರೆದಿರುವ ಪುಸ್ತಕಗಳನ್ನು ಇಲ್ಲಿ ಠೇವಣಿಯಾಗಿ ಇರಿಸಲಾಗಿದೆ.
ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಮುಖ್ಯಸ್ಥ ಮಹಂತ ನೃತ್ಯಗೋಪಾಲದಾಸ್ ಅವರು ಆಧ್ಯಾತ್ಮಿಕ ಉದ್ದೇಶದ ಈ ಬ್ಯಾಂಕನ್ನು 1970ರ ನವೆಂಬರ್‌ನಲ್ಲಿ ಆರಂಭಿಸಿದರು. ಭಾರತ ಮಾತ್ರವೇ ಅಲ್ಲದೆ ಅಮೆರಿಕ, ಬ್ರಿಟನ್, ಕೆನಡಾ, ನೇಪಾಳ, ಫಿಜಿ, ಯುಎಇ ಹಾಗೂ ಇತರ ಕೆಲವು ದೇಶಗಳ ಒಟ್ಟು 35 ಸಾವಿರ ಮಂದಿ ಈ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದಾರೆ.
ರಾಮ ಭಕ್ತರು ‘ಸೀತಾರಾಮ’ ಎಂದು ಬರೆದ ಕೋಟ್ಯಂತರ ಪುಸ್ತಕಗಳು ಈ ಬ್ಯಾಂಕ್‌ನಲ್ಲಿ ಇವೆ. ಹೊಸ ಮಂದಿರದಲ್ಲಿ ಬಾಲರಾಮನ ಮೂರ್ತಿಯ ಪ್ರಾಣಪ್ರತಿಷ್ಠಾಪನೆ ಆದ ನಂತರದಲ್ಲಿ ಬ್ಯಾಂಕ್‌ಗೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗಿದೆ ಎಂದು ವ್ಯವಸ್ಥಾಪಕ ಪುನೀತ್ ರಾಮ್ ದಾಸ್ ಮಹಾರಾಜ್ ಹೇಳುತ್ತಾರೆ.
‘ಭಕ್ತರಿಗೆ ಪುಸ್ತಕ ಹಾಗೂ ಕೆಂಪು ಶಾಯಿಯ ಪೆನ್ ಉಚಿತವಾಗಿ ನೀಡಲಾಗುತ್ತದೆ. ಪ್ರತಿ ಖಾತೆಯ ವಿವರಗಳನ್ನು ದಾಖಲಿಸಿ ಇಡಲಾಗುತ್ತದೆ. ಸೀತಾರಾಮ ಎಂದು ಐದು ಲಕ್ಷ ಬಾರಿ ಬರೆದು ಖಾತೆಯನ್ನು ತೆರೆಯಬಹುದು. ನಂತರ ಅವರಿಗೆ ಪಾಸ್‌ಪುಸ್ತಕ ನೀಡಲಾಗುತ್ತದೆ’ ಎಂದು ಪುನೀತ್ ರಾಮ್ ದಾಸ್ ವಿವರಿಸಿದರು.
‘ದೇಶದಲ್ಲಿ ಹಾಗೂ ವಿದೇಶಗಳಲ್ಲಿ ಒಟ್ಟು 136 ಶಾಖೆಗಳನ್ನು ತೆರೆಯಲಾಗಿದೆ. ಖಾತೆದಾರರು ಪುಸ್ತಕಗಳನ್ನು ಅಂಚೆಯ ಮೂಲಕವೂ ನಮಗೆ ಕಳುಹಿಸುತ್ತಾರೆ. ನಾವು ಇಲ್ಲಿ ಅದರ ವಿವರಗಳನ್ನು ದಾಖಲಿಸಿ ಇರಿಸುತ್ತೇವೆ’ ಎಂದು ಅವರು ಹೇಳಿದರು.
ಇಲ್ಲಿಗೆ ಬರುವವರು ‘ಸೀತಾರಾಮ’ ಎಂದು ಬರೆಯುವುದರ ಪ್ರಯೋಜನಗಳ ಬಗ್ಗೆಯೂ ಪ್ರಶ್ನಿಸುತ್ತಾರೆ. ‘ನಾವು ದೇವ, ದೇವತೆಯರ ಮಂದಿರಗಳಿಗೆ ಬರುವುದು ಮನಸ್ಸಿನ ಶಾಂತಿಗಾಗಿ. ಅದೇ ರೀತಿಯಲ್ಲಿ ಸೀತಾರಾಮ ಎಂದು ಬರೆದು, ಆ ಪುಸ್ತಕವನ್ನು ಇಲ್ಲಿ ಜಮಾ ಮಾಡುವುದು ಪ್ರಾರ್ಥನೆ ಸಲ್ಲಿಸುವ ಒಂದು ಬಗೆ. ಪ್ರತಿಯೊಬ್ಬರ ಪಾಪ, ಪುಣ್ಯಗಳನ್ನು ದೇವರು ದಾಖಲಿಸಿಡುತ್ತಾನೆ ಎಂದು ನಾವು ಹೇಳುವುದಿಲ್ಲವೇ? ಇದೂ ಅದೇ ರೀತಿಯದ್ದು’ ಎಂದು ಪುನೀತ್ ರಾಮ್ ದಾಸ್ ತಿಳಿಸಿದರು.
ಸೀತಾರಾಮ ಎಂದು 84 ಲಕ್ಷ ಬಾರಿ ಬರೆಯುವುದರಿಂದ ಮೋಕ್ಷ ಸಿಗುತ್ತದೆ ಎಂಬ ನಂಬಿಕೆ ಇದೆ ಎಂದರು. ಬಿಹಾರದ ಗಯಾದಿಂದ ಬಂದಿದ್ದ ಜೀತು ನಗರ್ ಅವರು 14 ವರ್ಷಗಳಿಂದ ಈ ಬ್ಯಾಂಕ್‌ಗೆ ಬರುತ್ತಿದ್ದಾರೆ. ‘ನಾನು ದೇವಸ್ಥಾನದಲ್ಲಿ ಪ್ರಾರ್ಥಿಸುವ ಬದಲು, ಸೀತಾರಾಮ ಎಂದು ಬರೆಯುತ್ತೇನೆ. ನನಗೆ ಸಮಸ್ಯೆ ಎದುರಾದಾಗಲೆಲ್ಲ ಇದು ನನ್ನ ನೆರವಿಗೆ ಬಂದಿದೆ. ವರ್ಷವಿಡೀ ಬರೆಯುವ ನಾನು ವರ್ಷಕ್ಕೆ ಒಮ್ಮೆ ಇಲ್ಲಿ ಜಮಾ ಮಾಡುತ್ತೇನೆ’ ಎಂದರು.
ಜೀತು ಅವರು 1.37 ಕೋಟಿಗಿಂತ ಹೆಚ್ಚು ಬಾರಿ ಸೀತಾರಾಮ ಎಂದು ಬರೆದು ಅದನ್ನು ಬ್ಯಾಂಕ್‌ಗೆ ಜಮಾ ಮಾಡಿದ್ದಾರೆ.
ರಾಮನಾಮ ಸ್ಮರಣೆ ಮಾಡುವುದರಿಂದ ರಾಮನಾಮ ಭಜಿಸುವುದರಿಂದ ಮತ್ತು ಅವನ ಹೆಸರನ್ನು ಬರೆಯುವುದರಿಂದ ಭಕ್ತರು ಆಳವಾದ ಆಧ್ಯಾತ್ಮಿಕ ಸಿರಿವಂತಿಕೆ ನೆಮ್ಮದಿ ಪಡೆದುಕೊಳ್ಳುತ್ತಾರೆ.- ಪುನೀತ್ ರಾಮ್ ದಾಸ್ ಬ್ಯಾಂಕ್‌ನ ವ್ಯವಸ್ಥಾಪಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.