ಮಧ್ಯ ಪ್ರದೇಶ : ಅರೆಬರೆ ಬಟ್ಟೆಗಳನ್ನು ಧರಿಸುವ ಯುವತಿಯರು ರಾಮಾಯಣದಲ್ಲಿ ಬರುವ ರಾಕ್ಷಸಿ 'ಶೂರ್ಪನಖಿ'ಯಂತೆ ಕಾಣುತ್ತಾರೆ ಎಂದು ಮಹಿಳೆಯರ ಬಟ್ಟೆ ಬಗ್ಗೆ ಬಿಜೆಪಿ ಪಕ್ಷದ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ ಹೇಳಿಕೆ ನೀಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ಸೃಷ್ಟಿಸಿದೆ.
ಮಧ್ಯಪ್ರದೇಶದ ಇಂದೋರ್‌ನಲ್ಲಿ ಹನುಮ ಜಯಂತಿ ಪ್ರಯುಕ್ತ ನಡೆದ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಸಂದರ್ಭ ಅವರು ಈ ಹೇಳಿಕೆ ನೀಡಿದ್ದಾರೆ. ’ರಾತ್ರಿ ವೇಳೆ ನಾನು ಹೊರಗೆ ಹೋಗುವಾಗ ಅನೇಕ ಯುವಕ–ಯುವತಿಯರು ಕುಡಿದ ಅಮಲಿನಲ್ಲಿ ತೇಲಾಡುತ್ತಿರುತ್ತಾರೆ. ದೇವರ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ ಅವರನ್ನು ನಿಲ್ಲಿಸಿ ಕೆನ್ನೆಗೆ ಬಾರಿಸಬೇಕೆಂದು ಎನ್ನಿಸುತ್ತದೆ. ಯುವತಿಯರು ಅರೆಬರೆ ಬಟ್ಟೆಗಳನ್ನು ಧರಿಸಿ ರಾಕ್ಷಸಿ ’ಶೂರ್ಪನಖಿ’ ಹಾಗೆ ಕಾಣುತ್ತಾರೆ’ ಎಂದು ಹೇಳಿದ್ದಾರೆ.
‘ಹೆಣ್ಣು ಮಕ್ಕಳನ್ನು ನಾವು ದೇವತೆಯೆಂದು ಕಾಣುತ್ತೇವೆ. ನಿಮಗೆ ಒಳ್ಳೆ ದೇಹ ನೀಡಿದ್ದಾನೆ. ಆದ್ದರಿಂದ ಒಳ್ಳೆಯ ಬಟ್ಟೆ ಧರಿಸಿ. ಪೋಷಕರು ಮಕ್ಕಳಿಗೆ ಈ ಬಗ್ಗೆ ತಿಳಿ ಹೇಳಬೇಕು’ ಎಂದು ಹೇಳಿದ್ದಾರೆ.
ಕೈಲಾಶ್ ವಿಜಯವರ್ಗೀಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಕೈಲಾಶ್ ಹೇಳಿಕೆಗೆ ಪ್ರತಿಪಕ್ಷಗಳು ಸೇರಿ ಹಲವರು ಆಕ್ರೋಶ ವ್ಯಕ್ತಪಡಿದ್ದಾರೆ.ಕೈಲಾಶ್ ಹೇಳಿಕೆಯನ್ನು ಗಮನಿಸದರೆ ಆತನೊಬ್ಬ ’ಸ್ತ್ರೀ ವಿರೋಧಿ’ಯಂತೆ ಕಾಣುತ್ತಾನೆ ಎಂದು ನೆಟ್ಟಿಗರು ಅಸಮಾಧಾನ ಹೊರಹಾಕಿದ್ದಾರೆ.
'ಬಿಜೆಪಿ ನಾಯಕರು ಪದೇ ಪದೇ ಮಹಿಳೆಯರನ್ನು ಅವಮಾನಿಸುತ್ತಿದ್ದಾರೆ. ಮಹಿಳೆಯರ ಬಗ್ಗೆ ಅವರು ಮಾತನಾಡುವ ಶೈಲಿಯಲ್ಲಿ ಅವರ ಮನಸ್ಥಿತಿಯನ್ನು ಕಾಣಬಹುದಾಗಿದೆ. ಹೆಣ್ಣು ಮಕ್ಕಳನ್ನು ಶೂರ್ಪನಖಿಗೆ ಹೋಲಿಸುವ ಮೂಲಕ ಬಿಜೆಪಿ ನಾಯಕ ಕೈಲಾಶ್ ವಿಜಯವರ್ಗೀಯ ಅವಮಾನ ಮಾಡಿದ್ದಾರೆ. ತಕ್ಷಣ ಅವರು ಕ್ಷಮೆ ಕೇಳಬೇಕು’ ಎಂದು ಕಾಂಗ್ರೆಸ್ ನಾಯಕಿ ಸಂಗೀತಾ ಶರ್ಮ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.