ADVERTISEMENT

ಆಂಧ್ರ ಸಿಎಂ ಪೋಸ್ಟರ್‌ ಹರಿದಿದ್ದಕ್ಕೆ ನಾಯಿ ಮೇಲೆಯೇ ಕೇಸ್‌!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಏಪ್ರಿಲ್ 2023, 11:43 IST
Last Updated 13 ಏಪ್ರಿಲ್ 2023, 11:43 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಿಜಯವಾಡ : ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್‌.ಜಗನ್‌ ಮೋಹನ್‌ ರೆಡ್ಡಿ ಪೋಸ್ಟರ್‌ ಅನ್ನು ಹರಿದ ಕಾರಣಕ್ಕೆ ನಾಯಿಯೊಂದರ ಮೇಲೆ ಪ್ರಕರಣ ದಾಖಲಿಸಲಾಗಿದೆ.

ಮನೆಯೊಂದರ ಗೋಡೆಯ ಮೇಲೆ ಅಂಟಿಸಿದ್ದ ಸಿಎಂ ವೈ.ಎಸ್‌. ಜಗನ್ ಮೋಹನ್‌ ರೆಡ್ಡಿ ಪೋಸ್ಟರ್‌ ಅನ್ನು ನಾಯಿಯೊಂದು ಬಾಯಿಯಿಂದ ಕಚ್ಚಿ ಹರಿದಿತ್ತು. ಈ ಪೋಸ್ಟರ್‌ ಮೇಲೆ ‘ಜಗನಣ್ಣ ಮಾ ಭವಿಷ್ಯತು‘ (ಜಗನ್ ಅಣ್ಣ ನಮ್ಮ ಭವಿಷ್ಯ) ಎಂದು ಬರೆದಿತ್ತು. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅನೇಕರ ಇದೇ ವಿಷಯ ಇಟ್ಟುಕೊಂಡು ಟ್ರೋಲ್‌ ಮಾಡಿದ್ದರು.

ದಾಸರಿ ಉದಯಶ್ರೀ ಎಂಬ ಮಹಿಳೆ ಸೇರಿದಂತೆ ಇತರ ಕೆಲವು ಮಹಿಳೆಯರು ವಿಜಯವಾಡ ಪೊಲೀಸ್‌ ಠಾಣೆಯಲ್ಲಿ ನಾಯಿ ಮೇಲೆ ದೂರು ನೀಡಿದ್ದಾರೆ ಎನ್ನಲಾಗಿದೆ. ದಾಸರಿ ಉದಯಶ್ರೀ ಪ್ರತಿಪಕ್ಷ ‘ತೆಲುಗು ದೇಸಂ ಪಕ್ಷ‘ದ ಕಾರ್ಯಕರ್ತೆ ಎಂದು ಹೇಳಲಾಗಿದೆ.

ADVERTISEMENT

ನಾಯಿ ಮೇಲೆ ದೂರು ನೀಡಿ ಹೊರಬಂದ ಮೇಲೆ ಮಾಧ್ಯಮಗಳೊಂದಿಗೆ ಮಾತನಾಡಿದ ದಾಸರಿ ಉದಯಶ್ರೀ, ‘ಜಗನ್‌ ಮೋಹನ್‌ ರೆಡ್ಡಿ ಅವರ ಪಕ್ಷವು 151 ಸೀಟುಗಳನ್ನು ಗೆದ್ದಿದೆ. ಅವರು ನಮ್ಮ ರಾಜ್ಯದ ಮುಖ್ಯಮಂತ್ರಿಯಾಗಿದ್ದು ಅವರ ಮೇಲೆ ನಮಗೆ ಅಪಾರ ಗೌರವವಿದೆ. ಅಂತಹ ಮಹಾನ್‌ ವ್ಯಕ್ತಿಯನ್ನು ಅವಮಾನಿಸಿರುವ ನಾಯಿ ರಾಜ್ಯದ ಆರು ಕೋಟಿ ಜನರಿಗೆ ನೋವುಂಟು ಮಾಡಿದೆ‘ ಎಂದು ಹೇಳಿದ್ದಾರೆ.

‘ನಮ್ಮ ಪ್ರೀತಿಯ ಮುಖ್ಯಮಂತ್ರಿಯನ್ನು ಅವಮಾನಿಸಿರುವ ನಾಯಿಯನ್ನು ಮತ್ತು ಈ ಕುತಂತ್ರದ ಹಿಂದಿರುವವರನ್ನು ಬಂಧಿಸಬೇಕೆಂದು ಪೊಲೀಸರಲ್ಲಿ ಮನವಿ ಮಾಡಿದ್ದೇವೆ‘ ಎಂದು ದಾಸರಿ ಹೇಳಿದ್ದಾರೆ. ವೈ.ಎಸ್‌. ಜಗನ್‌ ಮೋಹನ್‌ ರೆಡ್ಡಿಯನ್ನು ವ್ಯಂಗ್ಯ ಮಾಡುವುದಗೋಸ್ಕರ ಪ್ರತಿಪಕ್ಷಗಳು ದಾಸರಿ ಅವರ ಮೂಲಕ ಪ್ರಕರಣ ದಾಖಲಿಸಿವೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.