ADVERTISEMENT

ನ್ಯಾಯಾಂಗವು ವಿರೋಧ ಪಕ್ಷದ ಪಾತ್ರ ವಹಿಸಲು ಬಯಸುತ್ತಾರೆ: ಕಿರಣ್‌ ರಿಜಿಜು

ಕೆಲ ನಿವೃತ್ತ ನ್ಯಾಯಮೂರ್ತಿಗಳು, ಹೋರಾಟಗಾರರ ವಿರುದ್ಧ ಸಚಿವ ರಿಜಿಜು ವಾಗ್ದಾಳಿ

ಪಿಟಿಐ
Published 18 ಮಾರ್ಚ್ 2023, 14:00 IST
Last Updated 18 ಮಾರ್ಚ್ 2023, 14:00 IST
ಕಿರಣ್‌ ರಿಜಿಜು
ಕಿರಣ್‌ ರಿಜಿಜು   

ನವದೆಹಲಿ: ‘ಭಾರತ ವಿರೋಧಿ ಗ್ಯಾಂಗ್‌’ನ ಭಾಗವಾಗಿರುವ ಕೆಲ ನಿವೃತ್ತ ನ್ಯಾಯಮೂರ್ತಿಗಳು ಮತ್ತು ಹಲವು ಹೋರಾಟಗಾರರು ಭಾರತೀಯ ನ್ಯಾಯಾಂಗ ವ್ಯವಸ್ಥೆಯು ವಿರೋಧ ಪಕ್ಷದ ಪಾತ್ರ ವಹಿಸುವಂತೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು ಶನಿವಾರ ಹೇಳಿದ್ದಾರೆ.

ಉನ್ನತ ನ್ಯಾಯಾಲಯಗಳಿಗೆ ನ್ಯಾಯಮೂರ್ತಿಗಳ ನೇಮಕಾತಿಗಾಗಿನ ಸುಪ್ರೀಂ ಕೋರ್ಟ್‌ ಕೊಲಿಜಿಯಂ ವ್ಯವಸ್ಥೆ ಬಗ್ಗೆ ಮತ್ತೊಮ್ಮೆ ಟೀಕಾಪ್ರಹಾರ ಮಾಡಿದ ಅವರು, ‘ಈ ವ್ಯವಸ್ಥೆಯು ಕಾಂಗ್ರೆಸ್‌ ಪಕ್ಷದ ಪ್ರಮಾದದ ಫಲ’ ಎಂದು ಹೇಳಿದ್ದಾರೆ.

ಅವರು ‘ಇಂಡಿಯಾ ಟುಡೆ ಕಾಂಕ್ಲೇವ್’ನಲ್ಲಿ ಮಾತನಾಡಿದರು.

ADVERTISEMENT

ಸಚಿವ ರಿಜಿಜು ಅವರ ಟೀಕೆಗಳಿಗೆ ಅದೇ ವೇದಿಕೆಯಲ್ಲಿ ಪ್ರತಿಕ್ರಿಯಿಸಿದ ಸುಪ್ರೀಂಕೋರ್ಟ್‌ ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌, ಕೊಲಿಜಿಯಂ ವ್ಯವಸ್ಥೆಯನ್ನು ಸಮರ್ಥಿಸಿಕೊಂಡರು.

‘ಪ್ರತಿಯೊಂದು ವ್ಯವಸ್ಥೆಯು ಪರಿಪೂರ್ಣ ಇರುವುದಿಲ್ಲ. ಆದರೆ, ನಾವು ರೂಪಿಸಿರುವ ಈ ವ್ಯವಸ್ಥೆ ಅತ್ಯುತ್ತಮವಾಗಿದೆ. ನ್ಯಾಯಾಂಗ ಪ್ರಮುಖ ಪಾತ್ರವಹಿಸುವ ಕಾರಣ ಅದರ ಸ್ವಾತಂತ್ರ್ಯವನ್ನು ರಕ್ಷಣೆ ಮಾಡುವುದೇ ಈ ಕೊಲಿಜಿಯಂನ ಉದ್ದೇಶ’ ಎಂದು ಹೇಳಿದ್ದಾರೆ.

ರಾಹುಲ್‌ ಗಾಂಧಿ ವಿರುದ್ಧ ವಾಗ್ದಾಳಿ: ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಸಚಿವ ರಿಜಿಜು, ‘ಅತಿ ಹೆಚ್ಚು ಮಾತನಾಡುವ ವ್ಯಕ್ತಿಯೇ ತನಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂಬುದಾಗಿ ಅಲವತ್ತುಕೊಳ್ಳುತ್ತಿದ್ದಾರೆ’ ಎಂದರು.

‘ಭಾರತ ವಿರೋಧಿ ಶಕ್ತಿಗಳು ದೇಶದಲ್ಲಿ ಆಗಲಿ, ವಿದೇಶಿ ನೆಲದಲ್ಲಿಯಾಗಲಿ ಒಂದೇ ರೀತಿ ಮಾತನಾಡುತ್ತವೆ. ಭಾರತದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ, ಮಾನವ ಹಕ್ಕುಗಳು ನಾಶವಾಗಿವೆ ಎಂಬ ಮಾತುಗಳನ್ನೇ ಹೇಳುತ್ತವೆ. ಭಾರತ ವಿರೋಧಿ ಗುಂಪು ಬಳಸುವ ಭಾಷೆಯನ್ನೇ ರಾಹುಲ್‌ ಗಾಂಧಿಯೂ ಬಳಸುತ್ತಾರೆ’ ಎಂದು ರಿಜಿಜು ಆರೋಪಿಸಿದರು.

‘ರಾಹುಲ್‌ ಗಾಂಧಿ ಏನೇ ಮಾತನಾಡಿದರೂ ಅದಕ್ಕೆ ಈ ಭಾರತ ವಿರೋಧಿ ಗುಂಪು ವ್ಯಾಪಕ ಪ್ರಚಾರ ನೀಡುತ್ತದೆ. ಆದರೆ, ಇಂಥ ತುಕ್ಡೆ–ತುಕ್ಡೆ ಗುಂಪು ನಮ್ಮ ಸಾರ್ವಭೌಮತೆ, ಸಮಗ್ರತೆಯನ್ನು ನಾಶ ಮಾಡುವುದಕ್ಕೆ ನಾವು ಅವಕಾಶ ನೀಡುವುದಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.