ಜೋಧಪುರ : ಪ್ರವಾಸಿತಾಣಕ್ಕೆ ಬಂದಿದ್ದ ಕೊರಿಯನ್ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ಸಂಬಂಧ ಆರೋಪಿಯನ್ನು ಜೋಧಪುರದ ಪೊಲೀಸರು ಬಂಧಿಸಿದ್ದಾರೆ.
ವೃತ್ತಿಯಲ್ಲಿ ವ್ಲಾಗರ್ ಆಗಿರುವ ಕೊರಿಯನ್ ಮಹಿಳೆ ರಾಜಸ್ಥಾನದ ಜೋಧಪುರದಲ್ಲಿರುವ ಪ್ರವಾಸಿತಾಣವೊಂದಕ್ಕೆ ಬಂದಿದ್ದರು. ಈ ವೇಳೆ ವ್ಯಕ್ತಿಯೊಬ್ಬ ಲೈಂಗಿಕ ಕಿರುಕುಳ ನೀಡಿದ್ದನು. ಈ ವಿಡಿಯೊವನ್ನು ಕೊರಿಯನ್ ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಹರಿದಾಡುತ್ತಿದ್ದು, ಘಟನೆ ಬಗ್ಗೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಡಿಯೊ ಚಿತ್ರೀಕರಣ ಮಾಡುತ್ತಾ ಕೊರಿಯನ್ ಮಹಿಳೆ ಮೆಟ್ಟಿಲಿನಿಂದ ಇಳಿದು ಬರುತ್ತಿರುವ ವೇಳೆ ವ್ಯಕ್ತಿಯೊಬ್ಬ ಆಕೆಯನ್ನು ಹಿಂಬಾಲಿಸುತ್ತಾ ಬಂದಿದ್ದಾನೆ. ಇದನ್ನು ಗಮನಿಸಿದ ಮಹಿಳೆ ವ್ಯಕ್ತಿಗೆ ಮುಂದೆ ಹೋಗಲು ದಾರಿ ಬಿಟ್ಟಿದ್ದಾರೆ. ದಾರಿಯಲ್ಲಿ ಮುಂದೆ ಹೋಗದೆ ಆತ ಮಹಿಳೆ ಪಕ್ಕದಲ್ಲೇ ನಿಂತು ಕೊಂಡಿದ್ದನು. ಅಲ್ಲದೇ ಮಹಿಳೆಯ ಕೈ ಹಿಡಿದು ಲೈಂಗಿಕ ನೀಡಲು ಪ್ರಯತ್ನಿಸಿದ್ದಾನೆ. ತನ್ನ ಖಾಸಗಿ ಭಾಗವನ್ನು ತೋರಿಸಿದ್ದಲ್ಲದೇ ನಮ್ಮ ಮನೆ ಇಲ್ಲೇ ಪಕ್ಕದಲ್ಲೇ ಇದೆ ಎಂದು ಅರೆಬರೆ ಇಂಗ್ಲೀಷ್‌ನಲ್ಲಿ ಕೇಳಿದ್ದಾನೆ. ಇದರಿಂದ ಹೆದರಿದ ಮಹಿಳೆ ಅಲ್ಲಿಂದ ಕೂಗುತ್ತಾ ಓಡಿ ಹೋಗಿದ್ದಾರೆ.
ವಿಡಿಯೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡು ಆಕ್ರೋಶ ವ್ಯಕ್ತಪಡಿಸಿರುವ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲಾ, ‘ಇದು ಅತ್ಯಂತ ಅಸಹ್ಯಕರ ಹಾಗೂ ನಾಚಿಕೆಗೇಡಿನ ಸಂಗತಿಯಾಗಿದೆ. ಇಂತಹ ವ್ಯಕ್ತಿಗಳು ನಮ್ಮ ದೇಶದ ಮರ್ಯಾದೆಯನ್ನು ಹಾಳು ಮಾಡುತ್ತಿದ್ದಾರೆ. ಇಂತಹ ವ್ಯಕ್ತಿಗಳ ವಿರುದ್ಧ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋತ್ ಕಠಿಣ ಕ್ರಮ ಕೈಗೊಳ್ಳಬೇಕು‘ ಎಂದು ಒತ್ತಾಯಿಸಿದ್ದಾರೆ.
‘ವಿದೇಶಿ ಮಹಿಳಾ ಬ್ಲಾಗರ್ ತನ್ನ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಒಂದನ್ನು ಹಂಚಿಕೊಂಡಿದ್ದು, ಜೋಧ್‌ಪುರದಲ್ಲಿ ವ್ಯಕ್ತಿಯೊಬ್ಬ ತನಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಹೇಳಿದ್ದಾರೆ. ಈ ಮಾಹಿತಿಯ ಮೇರೆಗೆ ನಾವು ವ್ಯಕ್ತಿಯನ್ನು ಗುರುತಿಸಿ ಬಂಧಿಸಿದ್ದೇವೆ‘ ಎಂದು ಜೋಧ್‌ಪುರ ಡಿಸಿಪಿ ಡಾ ಅಮೃತಾ ದುಹಾನ್ ತಿಳಿಸಿದ್ದಾರೆ.
ಕಳೆದ ವರ್ಷ ಮುಂಬೈನಲ್ಲಿ ದಕ್ಷಿಣ ಕೊರಿಯಾದ ಮಹಿಳೆಯೊಬ್ಬರ (ವೃತ್ತಿಯಲ್ಲಿ ಯುಟ್ಯೂಬರ್) ಮೇಲೆ ಇಬ್ಬರು ದುಷ್ಕರ್ಮಿಗಳು ಲೈಂಗಿಕ ಕಿರುಕುಳ ನೀಡಿದ ಪ್ರಕರಣ ದಾಖಲಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೊ ಹರಿದಾಡಿದ್ದು, ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.