ADVERTISEMENT

ನ್ಯಾಷನಲ್ ಹೆರಾಲ್ಡ್ ಆಸ್ತಿ ಜಪ್ತಿ: ಇದು ಕೀಳುಮಟ್ಟದ ರಾಜಕೀಯ– ಕಪಿಲ್‌ ಸಿಬಲ್‌

ಪಿಟಿಐ
Published 22 ನವೆಂಬರ್ 2023, 10:08 IST
Last Updated 22 ನವೆಂಬರ್ 2023, 10:08 IST
ಕಪಿಲ್‌ ಸಿಬಲ್‌
ಕಪಿಲ್‌ ಸಿಬಲ್‌   

ನವದೆಹಲಿ: ‘ನ್ಯಾಷನಲ್ ಹೆರಾಲ್ಡ್’ ಜೊತೆ ನಂಟು ಹೊಂದಿರುವ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (ಎಜೆಎಲ್‌) ಮತ್ತು ಯಂಗ್‌ ಇಂಡಿಯನ್‌ಗೆ ಸೇರಿದ ₹751.9 ಕೋಟಿ ಮೊತ್ತದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಮುಟ್ಟುಗೋಲು ಹಾಕಿಕೊಂಡಿರುವ ಕ್ರಮವನ್ನು ರಾಜ್ಯಸಭೆ ಸದಸ್ಯ ಕಪಿಲ್‌ ಸಿಬಲ್‌ ಖಂಡಿಸಿದ್ದಾರೆ.

ಇ.ಡಿ. ಕ್ರಮಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್‌ ಮಾಜಿ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಕಪಿಲ್‌ ಸಿಬಲ್‌ ಅವರು ಇದೊಂದು ಕೀಳು ಮಟ್ಟದ ರಾಜಕೀಯ ಎಂದು ಟೀಕಿಸಿದ್ದಾರೆ.

ಈ ಬಗ್ಗೆ ಅವರು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಖಂಡನೆ ವ್ಯಕ್ತಪಡಿಸಿದ್ದಾರೆ. ಯಂಗ್‌ ಇಂಡಿಯನ್‌ ಲಾಭದಾಯಕ ಕಂಪನಿ ಅಲ್ಲ, ಅದರ ಷೇರುಗಳು ಮಾಲೀಕರ ಸ್ವತ್ತಲ್ಲ ಎಂದು ಕಾನೂನು ಹೇಳುತ್ತದೆ. ಆದಾಗ್ಯೂ ಇ.ಡಿ ಮುಟ್ಟುಗೋಲು ಹಾಕಿಕೊಂಡಿದೆ. ಇದು ಕೀಳು ಮಟ್ಟದ ರಾಜಕೀಯ ಎಂದು ಪರೋಕ್ಷವಾಗಿ ಕೇಂದ್ರ ಸರ್ಕಾರವನ್ನು ಸಿಬಲ್‌ ಟೀಕಿಸಿದ್ದಾರೆ.

ADVERTISEMENT

ರಾಜಕೀಯ ನಾಯಕರ ಆಜ್ಞೆಯನ್ನು ಅಧಿಕಾರಿಗಳು ಪಾಲಿಸಿದ್ದಾರೆ ಎಂದು ಸಿಬಲ್‌ ಅವರು ಕೇಂದ್ರಕ್ಕೆ ತಿರುಗೇಟು ನೀಡಿದ್ದಾರೆ.

‘ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಸೋಲು ಖಚಿತವಾಗಿರುವ ಕಾರಣ ಜನರ ಗಮನವನ್ನು ಬೇರೆಡೆ ಸೆಳೆಯಲು ಹೀಗೆ ಮಾಡಲಾಗಿದೆ, ಇದು ಸಣ್ಣ ಬುದ್ಧಿಯ, ಸೇಡು ತೀರಿಸಿಕೊಳ್ಳುವ ಕ್ರಮ‘ ಎಂದು ಕಾಂಗ್ರೆಸ್ ಟೀಕಿಸಿದೆ.

ಅಕ್ರಮವಾಗಿ ಸಂಪಾದಿಸಿದ ₹661.69 ಕೋಟಿ ಮೌಲ್ಯದ ಆಸ್ತಿಯನ್ನು ಎಜೆಎಲ್ ಹೊಂದಿತ್ತು, ಎಜೆಎಲ್‌ನ ಷೇರುಗಳಲ್ಲಿ ಹೂಡಿಕೆ ರೂಪದಲ್ಲಿ ಯಂಗ್ ಇಂಡಿಯಾ ₹90.21 ಕೋಟಿ ಹೊಂದಿತ್ತು ಎಂಬುದು ತನಿಖೆಯ ಸಂದರ್ಭದಲ್ಲಿ ಗೊತ್ತಾಯಿತು ಎಂದು ಇ.ಡಿ. ಹೇಳಿದೆ. 

ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ‍ಪ್ರಕಾಶನ ಸಂಸ್ಥೆ ಎಜೆಎಲ್‌. ಇದರ ಮಾಲೀಕತ್ವವು ಯಂಗ್ ಇಂಡಿಯನ್ ಪ್ರೈ.ಲಿ. ಕೈಯಲ್ಲಿದೆ. ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ಯಂಗ್ ಇಂಡಿಯನ್‌ನಲ್ಲಿ ಹೆಚ್ಚಿನ ಷೇರುಪಾಲು (ಇಬ್ಬರೂ ತಲಾ ಶೇ 38ರಷ್ಟು) ಹೊಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.