ತಿರುವನಂತಪುರ: 2010ರಲ್ಲಿ ಕೇರಳದ ಪ್ರೊಫೆಸರ್ ಕೈ ಕತ್ತರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಅಪರಾಧಿಗಳ ಪೈಕಿ ಮೂವರಿಗೆ ಎನ್‌ಐಎ ವಿಶೇಷ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.
ಶಿಕ್ಷೆಗೊಳಗಾದ ಅಪರಾಧಿಗಳು ಈಗ ನಿಷೇಧಕ್ಕೊಳಗಾಗಿರುವ ಇಸ್ಲಾಂ ಮೂಲಭೂತ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ(ಪಿಎಫ್ಐ) ಶಂಕಿತ ಕಾರ್ಯಕರ್ತರಾಗಿದ್ದರು.
ಜುಲೈ 4,2010ರಲ್ಲಿ ಇಡುಕ್ಕಿ ಜಿಲ್ಲೆಯ ತೊಡುಪುಳದ ನ್ಯೂಮನ್ ಕಾಲೇಜಿನ ಪ್ರೊಫೆಸರ್ ಟಿ.ಜೆ. ಜೋಸೆಫ್ ಅವರ ಬಲಗೈಯನ್ನು ಶಂಕಿತ ಪಿಎಫ್‌ಐ ಕಾರ್ಯಕರ್ತರು ಕತ್ತರಿಸಿದ್ದರು.
ಅಪರಾಧಿಗಳೆಂದು ಸಾಬೀತಾದ ಸಾಜಿಲ್, ನಜರ್ ಮತ್ತು ನಜೀಬ್ ಅವರಿಗೆ ಎನ್‌ಐಎ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಅನಿಲ್ ಎಸ್ ಭಾಸ್ಕರ್ ಶಿಕ್ಷೆ ವಿಧಿಸಿದ್ದಾರೆ. ಕಾನೂನು ಬಾಹಿರ ಚಟುವಟಿಕೆ ನಿಷೇಧ ಕಾಯ್ದೆ(ಯುಎಪಿಎ), ಭಾರತೀಯ ದಂಡ ಸಂಹಿತೆ ಮತ್ತು ಸ್ಫೋಟಕ ವಸ್ತುಗಳ ಕಾಯ್ದೆ ಅನ್ವಯ ತಪ್ಪಿತಸ್ಥರೆಂದು ಎರಡನೇ ಹಂತದ ತನಿಖೆಯಲ್ಲಿ ದೃಢಪಟ್ಟಿದೆ ಎಂದು ಬುಧವಾರ ಎನ್‌ಐಎ ಕೋರ್ಟ್ ತೀರ್ಪು ನೀಡಿತ್ತು.
ಎರ್ನಾಕುಲಂ ಜಿಲ್ಲೆಯ ಮುವಾಟ್ಟುಪುಳದಲ್ಲಿ ಭಾನುವಾರ ಚರ್ಚ್‌ನಲ್ಲಿ ಕುಟುಂಬದ ಜೊತೆ ಪ್ರಾರ್ಥನೆ ಸಲ್ಲಿಸಿ ಕುಟುಂಬದ ಜೊತೆ ಹಿಂದಿರುಗುತ್ತಿದ್ದಾಗ ಪ್ರೊಫೆಸರ್ ಮೇಲೆ ದಾಳಿ ನಡೆದಿತ್ತು. ಪ್ರೊಫೆಸರ್ ಅವರನ್ನು ವಾಹನದಿಂದ ಹೊರಗೆಳೆದ 7 ಮಂದಿಯ ಗುಂಪು ಕೈಕತ್ತರಿಸಿತ್ತು. ಕೈಕತ್ತರಿಸಿದ ಪ್ರಮುಖ ಆರೋಪಿ ಸವಾದ್ ಈಗಲೂ ತಲೆಮರೆಸಿಕೊಂಡಿದ್ದಾನೆ.
ಜೋಸೆಫ್ ಅವರು ಬಿಕಾಂ ಸೆಮಿಸ್ಟರ್ ಪರೀಕ್ಷೆಗೆ ತಯಾರಿಸಿದ ಪ್ರಶ್ನೆಪತ್ರಿಕೆಯಲ್ಲಿ ಧರ್ಮದ ಬಗ್ಗೆ ಅವಹೇಳನಕಾರಿ ವಿಷಯ ಸೇರಿಸಲಾಗಿದೆ ಎಂದು ಕೋಪಗೊಂಡಿದ್ದ ಸಾವದ್, ಪ್ರೊಫೆಸರ್ ಹತ್ಯೆಗೆ ಯೋಜಿಸಿದ್ದ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.