ADVERTISEMENT

‘ಜನತಾ ಕರ್ಪ್ಯೂ’ಗೆ ಒಂದು ವರ್ಷ: ಮತ್ತೆ ಏರುಗತಿಯಲ್ಲಿ ಕೋವಿಡ್ ಅಟ್ಟಹಾಸ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2021, 12:41 IST
Last Updated 22 ಮಾರ್ಚ್ 2021, 12:41 IST
ಕಳೆದ ವರ್ಷ ಜನತಾ ಕರ್ಫ್ಯೂ ಘೋಷಣೆಯಾದಾಗ ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣದಲ್ಲಿ ಕಂಡು ಬಂದ ದೃಶ್ಯ –ಪ್ರಜಾವಾಣಿ ಚಿತ್ರ
ಕಳೆದ ವರ್ಷ ಜನತಾ ಕರ್ಫ್ಯೂ ಘೋಷಣೆಯಾದಾಗ ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣದಲ್ಲಿ ಕಂಡು ಬಂದ ದೃಶ್ಯ –ಪ್ರಜಾವಾಣಿ ಚಿತ್ರ   

ನವದೆಹಲಿ: ಕೋವಿಡ್ –19 ತಡೆಗಟ್ಟುವ ನಿಟ್ಟಿನಲ್ಲಿ ದೇಶದಲ್ಲಿ ‘ಜನತಾ ಕರ್ಫ್ಯೂ’ ಆಚರಿಸಿ ಒಂದು ವರ್ಷ ಕಳೆದಿದ್ದು, ಭಾರಿ ಆರ್ಥಿಕ ಸಂಕಷ್ಟಕ್ಕೆ ಕಾರಣವಾದ ಈ ಸಾಂಕ್ರಾಮಿಕ ರೋಗ ಮತ್ತೆ ದೇಶದಲ್ಲಿ ಏರುಗತಿ ಕಂಡಿದೆ.

ಕಳೆದ ವರ್ಷ ಮಾರ್ಚ್ 22ರ ಸಂಜೆ 5ಗಂಟೆಗೆ ಜನರು ತಟ್ಟೆ, ಜಾಗಟೆಗಳನ್ನು ಬಾರಿಸಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದರು. ಜನರ ಆರೋಗ್ಯ ಮತ್ತು ಅಗತ್ಯ ಸೇವೆಗಳನ್ನು ಒದಗಿಸುವಲ್ಲಿ ನಿರತರಾಗಿರುವ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ಚಪ್ಪಾಳೆ ತಟ್ಟಿ ಧನ್ಯವಾದ ಸಮರ್ಪಿಸಿದ್ದರು.

ಭಾರತದಲ್ಲಿ ಮೊದಲ ಕೊರೊನಾ ವೈರಸ್ ಸೋಂಕು ಪ್ರಕರಣವು 2020 ಜನವರಿ 30ರಂದು ಕೇರಳದಲ್ಲಿ ವರದಿಯಾಗಿತ್ತು. ಮಾರ್ಚ್ 10ರಂದು ಕರ್ನಾಟಕದಲ್ಲಿ ಮೊದಲ ಸಾವು ವರದಿಯಾಗಿತ್ತು.ಕಳೆದ ವರ್ಷ ಈ ದಿನ ದೇಶದಲ್ಲಿ 360 ಮಂದಿಗೆ ಕೋವಿಡ್‌ ದೃಢಪಟ್ಟಿತ್ತು ಮತ್ತು 7 ಮಂದಿ ಮೃತಪಟ್ಟಿದ್ದರು.

ADVERTISEMENT

ಮಾರ್ಚ್ 25ರಿಂದ ಮೇ 31ರವರೆಗೆ ವಿಧಿಸಿದ್ದ ಕಠಿಣ ಲಾಕ್‌ಡೌನ್‌ನಿಂದಾಗಿ ದೇಶದ ಆರ್ಥಿಕ ಸ್ಥಿತಿಯ ಮೇಲೆ ಕೆಟ್ಟ ಪರಿಣಾಮ ಬೀರಿತ್ತು. ಜೂನ್‌ನಿಂದ ಹಂತ ಹಂತವಾಗಿ ಆರ್ಥಿಕ ಚಟುವಟಿಕೆಗಳು ಆರಂಭವಾದರೂ, ಅರ್ಥ ಸ್ಥಿತಿ ಇನ್ನೂ ಸರಿಯಾದ ಹಾದಿಗೆ ಮರಳಿಲ್ಲ.

ಸೆ.17ರಂದು ಅಧಿಕ ಪ್ರಕರಣ: ಕಳೆದ ವರ್ಷ ಸೆಪ್ಟೆಂಬರ್‌ 17ರಂದು ದೇಶದಲ್ಲಿ ಒಂದೇ ದಿನ 97,894 ಮಂದಿಗೆ ಕೋವಿಡ್‌ ದೃಢಪಟ್ಟಿತ್ತು. ಇದುವರೆಗೆ ದಾಖಲಾದ ಗರಿಷ್ಠ ಸಂಖ್ಯೆ ಇದುವೇ ಆಗಿದೆ. ಆಗಸ್ಟ್‌ನಿಂದ ನವೆಂಬರ್‌ವರೆಗೆ ದೇಶದಲ್ಲಿ ತೀವ್ರಗತಿಯಲ್ಲಿ ಕೋವಿಡ್‌ ಪ್ರಕರಣಗಳು ಏರಿಕೆಯಾಗಿದ್ದು, ಬಳಿಕ ಸ್ವಲ್ಪ ಸ್ವಲ್ಪವೇ ಕಡಿಮೆಯಾಗುತ್ತ ಬಂದಿತ್ತು. ಫೆಬ್ರುವರಿ 2ರಂದು ದೇಶದಲ್ಲಿ ದಾಖಲಾದ ಕೋವಿಡ್ ಪ್ರಕರಣ ಕೇವಲ8,635. ಕೋವಿಡ್‌ನ ಏರುಗತಿಯ ಬಳಿಕ ದೇಶದಲ್ಲಿ ದಾಖಲಾದ ಕನಿಷ್ಠ ಪ್ರಕರಣ ಇದಾಗಿತ್ತು.

ಇದೀಗ ಮತ್ತೆ ಕೋವಿಡ್‌ ಪ್ರಕರಣಗಳು ಏರುಗತಿಯಲ್ಲಿ ಸಾಗಿದ್ದು, ಮಾರ್ಚ್‌ 18ರಿಂದ ಪ್ರತಿದಿನ 30 ಸಾವಿರಕ್ಕಿಂತ ಅಧಿಕ ಪ್ರಕರಣಗಳು ವರದಿಯಾಗುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.