ADVERTISEMENT

ಜನ್ಮದಿನಾಂಕ: ಆಧಾರ್‌ ಕಾರ್ಡ್‌ ಅಧಿಕೃತ ಪುರಾವೆಯಲ್ಲ; ಸುಪ್ರೀಂ ಕೋರ್ಟ್

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2024, 16:05 IST
Last Updated 24 ಅಕ್ಟೋಬರ್ 2024, 16:05 IST
ಸುಪ್ರೀಂ ಕೋರ್ಟ್‌ 
ಸುಪ್ರೀಂ ಕೋರ್ಟ್‌    

ನವದೆಹಲಿ: ಜನ್ಮದಿನಾಂಕ ನಿರ್ಧರಿಸುವುದಕ್ಕೆ ಸಂಬಂಧಿಸಿ ಆಧಾರ್‌ ಕಾರ್ಡ್‌ ಅಧಿಕೃತ ಪುರಾವೆಯಲ್ಲ ಎಂದು ಸುಪ್ರೀಂ ಕೋರ್ಟ್‌ ಗುರುವಾರ ಹೇಳಿದೆ.

ಜನ್ಮ ದಿನಾಂಕದ ಪುರಾವೆಗೆ ಸಂಬಂಧಿಸಿ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಹೊರಡಿಸಿರುವ ಸುತ್ತೋಲೆ ಹಾಗೂ ಸಂಬಂಧಪಟ್ಟ ಕಾಯ್ದೆಯಲ್ಲಿನ ಅವಕಾಶಗಳನ್ನು ಸುಪ್ರೀಂ ಕೋರ್ಟ್‌ ಉಲ್ಲೇಖಿಸಿದೆ.

ಆಧಾರ್‌ ಕಾರ್ಡ್‌ ಅನ್ನು ಗುರುತಿನ ಪುರಾವೆಯಾಗಿ ಬಳಸಬಹುದು. ಇದು ಜನ್ಮದಿನಾಂಕದ ಅಧಿಕೃತ ಪುರಾವೆಯಲ್ಲ ಎಂದು ಯುಐಡಿಎಐ ತನ್ನ ಸುತ್ತೋಲೆಯಲ್ಲಿ ಸ್ಪಷ್ಟಪಡಿಸಿದೆ.

ADVERTISEMENT

ನ್ಯಾಯಮೂರ್ತಿಗಳಾದ ಸಂಜಯ್‌ ಕರೋಲ್‌ ಹಾಗೂ ಉಜ್ಜಲ್‌ ಭುಯಾಂನ್ ಅವರು ಇದ್ದ ನ್ಯಾಯಪೀಠ ಈ ಕುರಿತ ಅರ್ಜಿ ವಿಚಾರಣೆ ನಡೆಸಿತು.

ರಸ್ತೆ ಅಪಘಾತದಲ್ಲಿ ಸಂಭವಿಸಿದ ಸಾವಿಗೆ ಸಂಬಂಧಿಸಿ ಆಧಾರ್‌ ಕಾರ್ಡ್‌ನಲ್ಲಿ ನಮೂದಿಸಿದ್ದ ಜನ್ಮದಿನಾಂಕವನ್ನು ಆಧಾರವನ್ನಾಗಿ ಪರಿಗಣಿಸಿ ಪರಿಹಾರ ಮೊತ್ತವನ್ನು ಕಡಿತ ಮಾಡಿ ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ ತೀರ್ಪು ನೀಡಿತ್ತು. ಈ ತೀರ್ಪು ಪ್ರಶ್ನಿಸಿ ಸರೋಜ್‌ ಮತ್ತು ಇತರರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ಅಪಘಾತದಲ್ಲಿ ಸಂಭವಿಸಿದ ಸಾವಿಗೆ ಸಂಬಂಧಿಸಿ ಪರಿಹಾರ ಮೊತ್ತ ನಿಗದಿ ಮಾಡಲು ವರ್ಗಾವಣೆ ಪ್ರಮಾಣಪತ್ರವನ್ನೇ ಜನ್ಮದಿನಾಂಕ ದೃಢೀಕರಣಕ್ಕೆ ಆಧಾರವನ್ನಾಗಿ ಪರಿಗಣಿಸಿ ಮೋಟಾರು ಅಪಘಾತ ಕ್ಲೇಮುಗಳ ನ್ಯಾಯಮಂಡಳಿ ಹೊರಡಿಸಿದ್ದ ಆದೇಶವನ್ನು ಎತ್ತಿ ಹಿಡಿದಿದೆ.

ಪರಿಹಾರ ಮೊತ್ತವನ್ನು ₹9,22,336 ರಿಂದ ₹15 ಲಕ್ಷಕ್ಕೆ ಹೆಚ್ಚಿಸಿ ಹಾಗೂ ಬಡ್ಡಿದರವನ್ನು ಶೇ8ರಷ್ಟು ಎಂದು ನಿಗದಿ ಮಾಡಿ ಆದೇಶಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.