ನವದೆಹಲಿ: ಶಿವಸೇನಾ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ನಾಯಕ ಆದಿತ್ಯ ಠಾಕ್ರೆ ಹಾಗೂ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಮಧುಕೇಶ್ವರ್ ದೇಸಾಯಿ ಸೇರಿದಂತೆ ಭಾರತದ ಒಟ್ಟು ಆರು ಮಂದಿ 2023ನೇ ಸಾಲಿನ ‘ಭರವಸೆಯ ಜಾಗತಿಕ ಯುವ ನಾಯಕರು’ ಪಟ್ಟಿಯಲ್ಲಿ ಸ್ಥಾನ ಗಳಿಸಿದ್ದಾರೆ.
ವಿಶ್ವ ಆರ್ಥಿಕ ವೇದಿಕೆ (ಡಬ್ಲ್ಯುಇಎಫ್) ಮಂಗಳವಾರ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಟಿವಿಎಸ್ ಮೋಟರ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸುದರ್ಶನ್ ವೇಣು, ಜಿಯೊ ಹಾಪ್ಟಿಕ್ ಟೆಕ್ನಾಲಜೀಸ್ ಸಿಇಒ ಆಕ್ರಿತ್ ವೈಶ್, ಬಿಯೊಜೀನ್ ಸಿಇಒ ವಿಬಿನ್ ಬಿ.ಜೋಸೆಫ್ ಮತ್ತು ಪಾಲಿಸಿ 4.0 ರಿಸರ್ಚ್ ಫೌಂಡೇಷನ್ ಸಿಇಒ ತನ್ವಿ ರತ್ನ ಅವರೂ ಸ್ಥಾನ ಪಡೆದಿದ್ದಾರೆ.
‘ಭರವಸೆಯ ರಾಜಕೀಯ ನಾಯಕರು, ನವೋದ್ಯಮಿಗಳು, ಸಂಶೋಧಕರು, ಸಮುದಾಯ, ದೇಶ ಹಾಗೂ ಜಗತ್ತಿನಲ್ಲಿ ಮಹತ್ತರ ಬದಲಾವಣೆಯನ್ನು ತರಲು ಮುಂದಾಗಿರುವ, ದೂರದೃಷ್ಟಿಯುಳ್ಳ ಸಾಮಾಜಿಕ ಹೋರಾಟಗಾರರು ಸೇರಿದಂತೆ ಒಟ್ಟು 100 ಮಂದಿ ಈ ಬಾರಿಯ ಪಟ್ಟಿಯಲ್ಲಿ ಸ್ಥಾನ ಗಳಿಸಿದ್ದಾರೆ. ಇವರೆಲ್ಲರೂ 40 ವರ್ಷದೊಳಗಿನವರು’ ಎಂದು ಸ್ವಿಟ್ಜರ್ಲೆಂಡ್‌ನ ಜಿನಿವಾ ಮೂಲದ ಡಬ್ಲ್ಯುಇಎಫ್ ತಿಳಿಸಿದೆ.
ಯಂಗ್ ಗ್ಲೋಬಲ್ ಲೀಡರ್ಸ್ (ವೈಜಿಎಲ್) ವೇದಿಕೆಯು 2004ರಲ್ಲಿ ಅಸ್ತಿತ್ವಕ್ಕೆ ಬಂದಿತ್ತು. ಸದ್ಯ ಈ ವೇದಿಕೆಯು 120ಕ್ಕೂ ಅಧಿಕ ದೇಶಗಳ 1,400ಕ್ಕೂ ಹೆಚ್ಚು ಸದಸ್ಯರನ್ನು ಒಳಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.