ADVERTISEMENT

ಕೇಜ್ರಿವಾಲ್‌ರನ್ನು ಶ್ಲಾಘಿಸಿದ ಠಾಕ್ರೆ: ಸೇನಾ ಬಂಡಾಯ ನಾಯಕರು ಹೇಡಿಗಳು ಎಂದು ಕಿಡಿ

ಪಿಟಿಐ
Published 14 ಸೆಪ್ಟೆಂಬರ್ 2024, 6:48 IST
Last Updated 14 ಸೆಪ್ಟೆಂಬರ್ 2024, 6:48 IST
<div class="paragraphs"><p>ಆದಿತ್ಯ ಠಾಕ್ರೆ</p></div>

ಆದಿತ್ಯ ಠಾಕ್ರೆ

   

ಮುಂಬೈ: ಅಬಕಾರಿ ನೀತಿ ಹಗರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿರುವುದನ್ನು ಶಿವಸೇನಾ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ ಸ್ವಾಗತಿಸಿದ್ದಾರೆ. ಜತೆಗೆ, 2022ರಲ್ಲಿ ಶಿವಸೇನಾ ಪಕ್ಷದ ವಿಭಜನೆ ಕಾರಣರಾದವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕೇಜ್ರಿವಾಲ್ ಬಿಡುಗಡೆ ಕುರಿತು ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿರುವ ಅವರು, ‘ರಾಜಕೀಯಕ್ಕಿಂತ ಸತ್ಯವೇ ಮೇಲುಗೈ ಸಾಧಿಸುತ್ತದೆ’ ಎಂದು ಹೇಳಿದ್ದಾರೆ.

ADVERTISEMENT

‘ಅರವಿಂದ ಕೇಜ್ರಿವಾಲ್ ಅವರು ಜೈಲಿನಿಂದ ಬಿಡುಗಡೆಯಾಗಿರುವುದು ಸಂತಸ ಮೂಡಿಸಿದೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ರಕ್ಷಣೆಗಾಗಿ ಮತ್ತೆ ಹೋರಾಡಲು ಸಿದ್ಧವಾಗಿದ್ದಾರೆ’ ಎಂದು ತಿಳಿಸಿದ್ದಾರೆ.

‘ಒಂದು ಬದಿಯಲ್ಲಿ ತಮ್ಮತನಕ್ಕೆ ದ್ರೋಹ ಬಗೆದು ಓಡಿಹೋಗುವ ಹೇಡಿಗಳಿದ್ದಾರೆ. ಮತ್ತೊಂದು ಬದಿಯಲ್ಲಿ ಅರವಿಂದ ಕೇಜ್ರಿವಾಲ್‌ ಅವರಂತೆ ಸತ್ಯಕ್ಕಾಗಿ ಹೋರಾಡುವವರೂ ಇದ್ದಾರೆ! ಸತ್ಯಮೇವ ಜಯತೇ!’ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಸೇರಿದಂತೆ ಶಿವಸೇನಾದ ಬಂಡಾಯ ನಾಯಕರನ್ನು ಉಲ್ಲೇಖಿಸಿ ಆದಿತ್ಯ ಠಾಕ್ರೆ ಕಿಡಿಕಾರಿದ್ದಾರೆ.

2022ರ ಜೂನ್‌ನಲ್ಲಿ ಶಿಂದೆ ಅವರು ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರವನ್ನು ಪತನಗೊಳಿಸಿದರು. ಬಳಿಕ ಬಿಜೆಪಿ ಬೆಂಬಲದೊಂದಿಗೆ ಮುಖ್ಯಮಂತ್ರಿಯಾದರು. ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಕೂಡ 2023ರ ಜುಲೈನಲ್ಲಿ ಶಿಂದೆ ನೇತೃತ್ವದ ಸರ್ಕಾರದೊಂದಿಗೆ ಕೈಜೋಡಿಸಿತು.

ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿ ಸಿಬಿಐ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಜಾಮೀನು ನೀಡಿದ ಹಿನ್ನೆಲೆಯಲ್ಲಿ ಕೇಜ್ರಿವಾಲ್ ತಿಹಾರ್ ಜೈಲಿನಿಂದ ಶುಕ್ರವಾರ ಬಿಡುಗಡೆಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.