ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನೀರಿನ ಕೊರತೆ ಎದುರಾಗಿದ್ದು, ಹರಿಯಾಣದ ಬಿಜೆಪಿ ಸರ್ಕಾರವು ನಕಾರಾತ್ಮಕ ರಾಜಕೀಯ ಮಾಡುತ್ತಿದೆ. ಯಮುನಾ ನದಿಯಿಂದ ದೆಹಲಿಗೆ ನೀರು ಪೂರೈಕೆಯನ್ನು ನಿಲ್ಲಿಸಿದೆ ಎಂದು ಎಎಪಿ ಮತ್ತೊಮ್ಮೆ ಆರೋಪಿಸಿದೆ.
ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಎಎಪಿಯ ರಾಷ್ಟ್ರೀಯ ವಕ್ತಾರೆ ಪ್ರಿಯಾಂಕಾ ಕಕ್ಕರ್, ‘ಜೂನ್ 6 ರಂದು ದೆಹಲಿಗೆ 137 ಕ್ಯೂಸೆಕ್ ಹೆಚ್ಚುವರಿ ನೀರನ್ನು ಬಿಡುಗಡೆ ಮಾಡುವಂತೆ ಹಿಮಾಚಲ ಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತು. ಜತೆಗೆ ಈ ನೀರು ರಾಷ್ಟ್ರ ರಾಜಧಾನಿಗೆ ತಲುಪಲು ಸುಗಮಗೊಳಿಸುವಂತೆ ಹರಿಯಾಣಕ್ಕೆ ಸೂಚಿಸಿತ್ತು. ಆದರೆ ಹರಿಯಾಣದ ಬಿಜೆಪಿ ಸರ್ಕಾರವು ಹಿಮಾಚಲ ಪ್ರದೇಶದಿಂದ ದೆಹಲಿಗೆ ಬರಬೇಕಾದ ನೀರನ್ನು ನಿಲ್ಲಿಸಿದೆ. ಮಾತ್ರವಲ್ಲದೆ ಎರಡು ರಾಜ್ಯಗಳ ನಡುವಿನ ಒಪ್ಪಂದದ ಪ್ರಕಾರ ರಾಷ್ಟ್ರ ರಾಜಧಾನಿಯ 1,050 ಕ್ಯೂಸೆಕ್‌ನ ಪಾಲನ್ನು 200 ಕ್ಯೂಸೆಕ್‌ಗಳಷ್ಟು ಕಡಿಮೆ ಮಾಡಿದೆ’ ಎಂದು ದೂರಿದ್ದಾರೆ.
ಕಳೆದ15 ದಿನಗಳ ಅವಧಿಯಲ್ಲಿ ಹರಿಯಾಣ ಸರ್ಕಾರವು ರಾಷ್ಟ್ರ ರಾಜಧಾನಿಯ ಪಾಲಿನ ನೀರನ್ನು ಬಿಡುಗಡೆ ಮಾಡಿಲ್ಲ ಎಂದು ದೆಹಲಿ ಸರ್ಕಾರ ಆರೋಪಿಸಿದೆ.
ಎಎಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ಹರಿಯಾಣ ಬಿಜೆಪಿ, ನೀರಿನ ಕೊರತೆ ವಿಚಾರದಲ್ಲಿ ಎಎಪಿ ನಾಯಕರು ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.