ADVERTISEMENT

ಮಾಲೀವಾಲ್ ಜೊತೆ ಕೇಜ್ರಿವಾಲ್ ಆಪ್ತ ಸಹಾಯಕ ದುರ್ವರ್ತನೆ: ಎಎಪಿಯಿಂದ ಕ್ರಮದ ಭರವಸೆ

ಪಿಟಿಐ
Published 14 ಮೇ 2024, 15:49 IST
Last Updated 14 ಮೇ 2024, 15:49 IST
   

ನವದೆಹಲಿ: ರಾಜ್ಯಸಭಾ ಸದಸ್ಯೆ ಸ್ವಾತಿ ಮಾಲೀವಾಲ್ ಜೊತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಮನೆಯಲ್ಲಿ, ಅವರ ಆಪ್ತ ಸಹಾಯಕ ವಿಭವ್ ಕುಮಾರ್ ದುರ್ವರ್ತನೆ ತೋರಿರುವುದನ್ನು ಎಎಪಿ ಒಪ್ಪಿಕೊಂಡಿದೆ. ಅಲ್ಲದೆ, ವಿಭವ್ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿಯೂ ಹೇಳಿದೆ.

ಸೋಮವಾರ ಘಟನೆ ಬಳಿಕ, ಪೊಲೀಸರಿಗೆ ಕರೆ ಮಾಡಿದ್ದ ಮಾಲೀವಾಲ್ ಅವರು ತಮ್ಮ ಮೇಲೆ ವಿಭವ್ ಹಲ್ಲೆ ಮಾಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಆದರೆ, ಪೊಲೀಸ್ ಠಾಣೆಗೆ ತೆರಳಿಯೂ ಅಧಿಕೃತ ದೂರು ನೀಡದೆ ವಾಪಸ್ ಆಗಿದ್ದಾರೆ. ಈ ಬಗ್ಗೆ ಮಾಲೀವಾಲ್, ಮುಖ್ಯಮಂತ್ರಿ ಕಚೇರಿ ಅಥವಾ ಎಎಪಿಯಿಂದ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆ ಆಗಿಲ್ಲ.

ಆದರೆ, ಎಎಪಿಯ ಹಿರಿಯ ನಾಯಕ ಮತ್ತು ರಾಜ್ಯಸಭಾ ಸದಸ್ಯ ಸಂಜಯ್ ಕುಮಾರ್ ಸುದ್ದಿಗಾರರಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಸೋಮವಾರ ಕೇಜ್ರಿವಾಲ್ ಅವರ ನಿವಾಸದಲ್ಲಿ ಮಾಲೀವಾಲ್ ಮತ್ತು ವಿಭವ್ ಕುಮಾರ್ ಅವರ ನಡುವೆ'ಖಂಡನೀಯ ಘಟನೆ' ನಡೆದಿದೆ ಎಂದು ಹೇಳಿದ್ದಾರೆ.

ADVERTISEMENT

‘ನಿನ್ನೆ, ಮಾಲೀವಾಲ್ ಅರವಿಂದ ಕೇಜ್ರಿವಾಲ್ ಅವರನ್ನು ಭೇಟಿಯಾಗಲು ಅವರ ನಿವಾಸಕ್ಕೆ ಹೋಗಿದ್ದರು. ಡ್ರಾಯಿಂಗ್ ರೂಮ್‌ನಲ್ಲಿ ಕಾಯುತ್ತಿದ್ದಾಗ, ಅಲ್ಲಿಗೆ ಬಂದ ವಿಭವ್ ಕುಮಾರ್ ಅವರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಇದು ಅತ್ಯಂತ ಖಂಡನೀಯ ಘಟನೆಯಾಗಿದೆ. ಕೇಜ್ರಿವಾಲ್ ಅವರ ಗಮನಕ್ಕೆ ಈ ವಿಷಯ ಬಂದಿದ್ದು, ಕಠಿಣ ಕ್ರಮ ಕೈಗೊಳ್ಳಲಿದ್ದಾರೆ’ಎಂದು ತಿಳಿಸಿದ್ದಾರೆ.

ಘಟನೆ ಕುರಿತಂತೆ ಮಾಲೀವಾಲ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದೂ ಅವರು ಹೇಳಿದ್ದಾರೆ.

ಮಾಲೀವಾಲ್ ಪಕ್ಷದ ಹಿರಿಯ ನಾಯಕಿ. ಪಕ್ಷವು ಅವರ ಬೆಂಬಲಕ್ಕೆ ನಿಂತಿದ್ದು, ಕೇಜ್ರಿವಾಲ್ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಅಂತಹ ಕೃತ್ಯಗಳನ್ನು ಪಕ್ಷ ಸಹಿಸುವುದಿಲ್ಲ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.